HomeGadag Newsಸರ್ವ ಸುಂದರ ಕನ್ನಡ ಶಾಲೆ

ಸರ್ವ ಸುಂದರ ಕನ್ನಡ ಶಾಲೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಖಾಸಗಿ ಶಾಲೆಗಳ ಆಡಂಬರ-ಅಬ್ಬರದ ನಡುವೆ ಸರ್ಕಾರಿ ಶಾಲೆಗಳು ಬಡವಾಗುತ್ತಿವೆ ಮತ್ತು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ವಾಸ್ತವದ ನಡುವೆಯೂ ಶಿಕ್ಷಣ ಕಾಶಿ ಎಂದೇ ಕರೆಯುವ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿಯಲ್ಲಿನ ಉನ್ನತೀಕರಿಸಿದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿನ ಶಿಕ್ಷಕರು, ಎಸ್‌ಡಿಎಂಸಿ, ಪಾಲಕರು, ಹಳೆಯ ವಿದ್ಯಾರ್ಥಿಗಳು, ಅಧಿಕಾರಿಗಳು, ಶಿಕ್ಷಣ ಪ್ರೇಮಿಗಳ ಇಚ್ಛಾಶಕ್ತಿಯಿಂದ ಈ ಶಾಲೆ ಎಲ್ಲರ ಕಣ್ಮನ ಸೆಳೆಯುತ್ತಿದೆ.

ಶ್ರೇಷ್ಠ ಶಿಕ್ಷಣ ತಜ್ಞ ರೋಸೋ ಅವರ ನಿಸರ್ಗವಾದದ ತತ್ವದಡಿ ಮಕ್ಕಳಿಗೆ ಗುಣಾತ್ಮಕ, ಪರಿಣಾಮಾತ್ಮಕ ಶಿಕ್ಷಣಕ್ಕಾಗಿ ನೈಸರ್ಗಿಕ ಪರಿಸರ ಸೃಷ್ಟಿಸಿ ಆಟ-ಪಾಠ-ಊಟದೊಂದಿಗೆ ಕಲಿಯುವ-ಕಲಿಸುವ ಸುಂದರ ಪರಿಸರದ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಸರಕಾರಿ ಶಾಲೆಗಳಲ್ಲಿ ಕಲಿಕಾ ಸೌಲಭ್ಯ, ವಾತಾವರಣ ಕಡಿಮೆ. ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುತ್ತದೆ. ಖಾಸಗಿ/ಇಂಗ್ಲಿಷ್ ಮೀಡಿಯಂ ಶಾಲೆಗಳೇ ಬೆಸ್ಟ್ ಎಂಬ ಪಾಲಕರ ಮನಸ್ಥಿತಿಯನ್ನು ಬದಲಾಯಿಸುವ ಶಕ್ತಿ ಈ ಸರ್ಕಾರಿ ಶಾಲೆ ಹೊಂದಿದೆ.

1865ರಲ್ಲಿ ಸ್ಥಾಪನೆಯಾದ ಈ ಶಾಲೆ 160 ವರ್ಷಗಳ ಶೈಕ್ಷಣಿಕ ಸಾಧನೆಯೊಂದಿಗೆ ಮುನ್ನಡೆಯುತ್ತಿದ್ದು, ಸದ್ಯ 1ರಿಂದ 8ನೇ ತರಗತಿ(ಉನ್ನತೀಕರಿಸಿದ)ವರೆಗಿನ ಶಾಲೆಯಲ್ಲಿ 140ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶ್ರೀಮಂತ ಖಾಸಗಿ ಶಾಲೆಗಳಲ್ಲಿ ಇರುವ ತಂತ್ರಜ್ಞಾನ ಆಧಾರಿತ ಶಿಕ್ಷಣ, ಉತ್ತಮ ಪರಿಸರ, ಕಲಿಕಾ ವಾತಾವರಣ ಶಾಲೆಯಲ್ಲಿ ಕಂಡು ಬರುತ್ತಿದೆ. ಎರಡು ಎಕರೆಗಿಂತ ವಿಶಾಲವಾದ ಶಾಲೆಯ ಸುತ್ತಲೂ ಅನೇಕ ಗಿಡ-ಮರಗಳನ್ನು ಬೆಳೆಸಲಾಗಿದೆ. ಅಲಂಕಾರಿಕ ಗಿಡಮರಗಳು ಶಾಲೆಯ ಅಂದ ಹೆಚ್ಚಿಸಿವೆ. ಅನೇಕ ಸಂದರ್ಭದಲ್ಲಿ ಪರಿಸರದಡಿ ಪಾಠಬೋಧನೆ ಮಾಡಲಾಗುತ್ತದೆ. ಶಾಲೆಯ 8 ಕೊಠಡಿಗಳಲ್ಲಿ ಕಲಿಕೆಗೆ ಪೂರಕವಾದ ಚಿತ್ರಸಹಿತ ವಿಷಯ ವಿವರಣೆ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಎಲ್‌ಇಡಿ ಟಿವಿ, ಇಂಟರ್ ಮಿಷನ್, ಸೌಂಡ್ ಸಿಸ್ಟಮ್, ಸ್ಮಾರ್ಟ್ ಕ್ಲಾಸ್‌ಗಳ ಮೂಲಕ ಕಲಿಕಾ ವಾತಾವರಣ ಸೃಷ್ಟಿಸಲಾಗಿದೆ. ಅಲ್ಲದೇ ಶುದ್ಧ ನೀರಿನ ಘಟಕ, ಶೌಚಾಲಯ, ಆಟದ ಮೈದಾನ ಶಾಲೆಯ ವಿಶೇಷತೆಗಳಾಗಿವೆ.

ಶಾಲೆಯ ಎಸ್‌ಡಿಎಂಸಿ ಸಹಕಾರ ಮತ್ತು ಶಿಕ್ಷಕರ ಒಗ್ಗಟ್ಟಿನಿಂದ ಶಾಲೆಯ ಹೊರಾವರಣದ ಕಂಪೌಂಡಿಗೆ ವರ್ಲಿ ಚಿತ್ರಕಲೆಯಿಂದ ಅಲಂಕರಿಸಲಾಗಿದೆ. ಶಿಕ್ಷಣ ಇಲಾಖೆ ಯೋಜನೆಗಳನ್ನು ಬಿಡಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ. ಅಕ್ಷರ ದಾಸೋಹ, ಪ್ರತಿಭಾ ಕಾರಂಜಿ, ಕಲೋತ್ಸವ, ಇನ್ಸ್ಪೈರ್‌ ಅವಾರ್ಡ್, ಸಸ್ಯಶಾಮಲಾ, ಉಚಿತ ಸಮವಸ್ತç, ಪಠ್ಯಪುಸ್ತಕ, ಗ್ರಂಥಾಲಯ, ವಿದ್ಯಾನಿಧಿ, ಎನ್‌ಎಂಎಂಎಸ್, ಶಿಷ್ಯವೇತನ, ಇಕೊ ಕ್ಲಬ್ (ಮಕ್ಕಳ ಪರಿಸರ ಸಂಘ) ಇಂಗ್ಲಿಷ್ ಕಲಿಕೆ, ರೇಡಿಯೋ ಪಾಠ, ಕರ್ನಾಟಕ ದರ್ಶನ, ನನ್ನ ಶಾಲೆ ನನ್ನ ಕೊಡುಗೆ, ಕಲಿಕಾ ಹಬ್ಬ ಸೇರಿದಂತೆ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಪರಿಜ್ಞಾನ, ಜಾಗೃತಿ ಮೂಡಿಸುವ ವಿಶೇಷ ಕಾರ್ಯವನ್ನು ಶಾಲಾವರಣದ ಗೋಡೆಯಲ್ಲಿ ಚಿತ್ರ ಸಹಿತ ಬರೆಯಿಸಲಾಗಿದೆ. ಒಡೆಯರ ಮಲ್ಲಾಪುರದ ಮೊರಾರ್ಜಿ ದೇಸಾಯಿ ಶಾಲೆಯ ಚಿತ್ರಕಲಾ ಶಿಕ್ಷಕರ ಕಲಾ ನೈಪುಣ್ಯತೆ ಇಲ್ಲಿ ಕಂಡು ಬರುತ್ತದೆ.

ಡಿಡಿಪಿಐ, ಬಿಇಓ ಅವರ ಮಾರ್ಗದರ್ಶನ, ಎಸ್‌ಡಿಎಂಸಿ, ಶಿಕ್ಷಕರು ಪಾಲಕರ ಸಹಕಾರದಿಂದ ಶಾಲೆಯನ್ನು ಸುಂದರಗೊಳಿಸುವ ಜತೆಗೆ ಕಲಿಕಾ ವಾತಾವರಣ ಸೃಷ್ಟಿಸಲು ಸಾಧ್ಯವಾಗಿದೆ.

– ಎನ್.ವಿ. ಕುಲಕರ್ಣಿ.

ಮುಖ್ಯ ಶಿಕ್ಷಕರು.

ಶಂಭುಲಿಂಗ ಕಟ್ಟಿಮನಿ,

ಎಸ್‌ಡಿಎಂಸಿ ಅಧ್ಯಕ್ಷ.

ಶಿಗ್ಲಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಲ್ಲ ಶಿಕ್ಷಕರು, ಎಸ್‌ಡಿಎಂಸಿ, ಪಾಲಕರ ಸಹಕಾರದಿಂದ ಅತ್ಯಂತ ವಿಭಿನ್ನ, ಉಪಯುಕ್ತ, ಆಕರ್ಷಕ ಕಲಿಕಾ ವಾತಾವರಣ ಸೃಷ್ಟಿಸುವ ಮೂಲಕ ಮಕ್ಕಳ ಕಲಿಕೆಯನ್ನು ಪರಿಣಾಮಕಾರಿಗೊಳಿಸುವ ಪ್ರಶಂಸಾರ್ಹ ಕಾರ್ಯ ಮಾಡಿದ್ದಾರೆ. ಸ್ಪೂರ್ತಿದಾಯಕ ಈ ಕಾರ್ಯಕ್ಕೆ ಇಲಾಖೆ ಅಭಿನಂದಿಸುತ್ತದೆ.

– ಆರ್.ಎಸ್ ಬುರಡಿ.

ಡಿಡಿಪಿಐ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!