ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಮಹಿಳಾ ಶಿಕ್ಷಣದ ಪ್ರವರ್ತಕರಾದ ಸಾವಿತ್ರಿಬಾ ಫುಲೆ ಅವರು ಭಾರತೀಯ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಲು ಮತ್ತು ಮಹಿಳೆಯರು ತಲೆ ಎತ್ತಿ ಬದುಕಲು ಸಹಾಯ ಮಾಡಲು ತಮ್ಮ ಜೀವನನ್ನು ಮುಡಿಪಾಗಿಟ್ಟರು. ನಮ್ಮ ದೇಶದಲ್ಲಿ ಇಂದು ಮಹಿಳೆಯರಿಗೆ ಸಮಾನ ಹಕ್ಕುಗಳು ಸಿಗುತ್ತಿರುವುದು ಅಂದು ಸಾವಿತ್ರಿಬಾ ಫುಲೆ ಅವರು ನಡೆಸಿದ ಹೋರಾಟದ ಫಲ ಎಂದು ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ ಹೇಳಿದರು.
ಅವರು ಗದಗ ಜಿಲ್ಲಾ ಸ್ಲಂ ಸಮಿತಿ ಹಾಗೂ ಮಹಿಳಾ ಸಮಿತಿಯ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾ ಫುಲೆ ಅವರ 194ನೇ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಭಾರತದ ಸ್ವಾತಂತ್ರ ಸಂಗ್ರಾಮಕ್ಕೊ ಮೊದಲೇ ಇವರು ಅಜ್ಞಾನ ವಿಮೋಚನೆಗೆ ಅಕ್ಷರ ಕ್ರಾಂತಿಯ ಹೆಜ್ಜೆಯನ್ನಿಟ್ಟು ಶೋಷಿತ ಸಮುದಾಯಗಳಿಗೆ ಮತ್ತು ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದರು ಎಂದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಮಾತನಾಡಿ, ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾ ಫುಲೆ ಅವರು ಶೋಷಿತ ಸಮುದಾಯ ಮತ್ತು ಮಹಿಳೆಯರಿಗೆ ಸಂಕಷ್ಟದ ದಿನಮಾನಗಳಲ್ಲೂ ಅಕ್ಷರವನ್ನು ಕಲಿಸಿ ಅವರನ್ನು ಮೇಲೆತ್ತುವಲ್ಲಿ ಶ್ರಮಿಸಿದ್ದಾರೆ ಎಂದರು.
ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಸ್ಲಂ ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಮಂಜುನಾಥ ಶ್ರೀಗಿರಿ, ಮೆಹರುನಿಸಾ ಡಂಬಳ, ದುರ್ಗಪ್ಪ ಮಣ್ಣವಡರ, ಖಾಜಾಸಾಬ ಇಸ್ಮಾಯಿಲನವರ, ಮೈಮುನ ಬೈರಕದಾರ, ಶಂಕ್ರಪ್ಪ ಪೂಜಾರ, ಜಂದಿಸಾಬ ಬಳ್ಳಾರಿ, ಮಕ್ತುಮಸಾಬ ಮುಲ್ಲಾನವರ, ಸಾಕ್ರುಬಾಯಿ ಗೋಸಾವಿ ಮುಂತಾದವರಿದ್ದರು.



