ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಗತ್ತಿನ ಗಮನ ಸೆಳೆದ ಅಯೋಧ್ಯಾ ಶ್ರೀ ರಾಮನ ಸುಂದರ ಮೂರ್ತಿಯನ್ನು ತಯಾರಿಸಿದ ಮೈಸೂರಿನ ಖ್ಯಾತ ಶಿಲ್ಪಿ ಅರುಣ ಯೋಗಿ ಅವರಿಂದ ಮುಕ್ತಿಮಂದಿರ ಧರ್ಮಕ್ಷೇತ್ರದ ರಂಭಾಪುರಿ ಲಿಂ. ಜಗದ್ಗುರು ವೀರಗಂಗಾಧರ ಭಗವತ್ಪಾದರ ಪ್ರತಿಮೆ ನಿರ್ಮಾಣವಾಗಲಿರುವದು ಈ ಭಾಗದ ಭಕ್ತರಲ್ಲಿ ಸಂಚಲನ ಮೂಡಿಸಿದೆ. ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿಯನ್ನು ಅದ್ಭುತವಾಗಿ ಕೆತ್ತನೆ ಮಾಡಿ ಮೂರ್ತಿಗೆ ಜೀವಕಳೆ ತುಂಬಿದ್ದ ಅರುಣ ಯೋಗಿಯವರಿಂದ ಲಿಂಗೈಕ್ಯ ಜಗದ್ಗುರುಗಳ ಮೂರ್ತಿ ಸಿದ್ಧವಾಗಲಿರುವುದು ಭಕ್ತರಲ್ಲಿ ಹರ್ಷ ಮೂಡಿಸಿದೆ.
ಲಿಂ.ವೀರಗಂಗಾಧರ ಜಗದ್ಗುರುಗಳ ಸಂಕಲ್ಪದಂತೆ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗಗಳ ಸ್ಥಾಪನೆ ಕಾರ್ಯ ಭರದಿಂದ ಸಾಗಿದೆ. ಒಂದು ವರ್ಷದಲ್ಲಿ ದೇಶದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಲಿದೆ. ಈ ಶಿವಲಿಂಗಗಳ ನಡುವೆ ರಂಭಾಪುರಿ ಲಿಂ.ಜ. ಶ್ರೀ ವೀರಗಂಗಾಧರ ಭಗವತ್ಪಾದರ 25 ಅಡಿ ಎತ್ತರದ ಬೃಹತ್ ಪ್ರತಿಮೆ ನಿರ್ಮಾಣ ಮಾಡುವ ಯೋಜನೆ ಹೊಂದಲಾಗಿದೆ. ಈ ಮೂರ್ತಿಯನ್ನು ಪ್ರಸಿದ್ಧ ಶಿಲ್ಪಿ ಮೈಸೂರಿನ ಅರುಣ ಯೋಗಿ ಅವರಿಂದಲೇ ಕೆತ್ತನೆ ಕಾರ್ಯ ಮಾಡಿಸಬೇಕೆಂದು ಡಾವಣಗೆರೆಯ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಅವರು ನಿರ್ಧರಿಸಿ ಅವರನ್ನು ಸಂಪರ್ಕಿಸಿ ಒಪ್ಪಿಗೆ ಪಡೆದುಕೊಂಡಿದ್ದಾರೆ. ಅರುಣ ಅವರ ಕೈಚಳಕದಿಂದ ನಿರ್ಮಾಣವಾಗುವ ಶ್ರೀ ವೀರಗಂಗಾಧರ ಜಗದ್ಗುರುಗಳವರ ಮೂರ್ತಿಯಿಂದ ಮುಕ್ತಿಮಂದಿರದ ತ್ರಿಕೋಟಿ ಲಿಂಗಕ್ಕೆ ಹೆಚ್ಚು ಮಹತ್ವ ಬರಲಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರವಷ್ಟೇ ಅರುಣ ಯೋಗಿಯವರು ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಈ ಕುರಿತು ಚರ್ಚೆ ನಡೆಸಿದರು. ನಂತರ ತ್ರಿಕೋಟಿ ಲಿಂಗ ಸ್ಥಾಪನೆಯ ಸ್ಥಳ, ನೀಲನಕ್ಷೆ ವೀಕ್ಷಿಸಿ, ಮೂರ್ತಿ ಸ್ಥಾಪನೆಯ ಜಾಗೆಯನ್ನು ಪರಿಶೀಲಿಸಿ ಮೂರ್ತಿಯ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಅರುಣ ಯೋಗಿ ಅವರನ್ನು ಶ್ರೀಮಠದಿಂದ ಪಟ್ಟಾಧ್ಯಕ್ಷರು ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಅರುಣ ಯೋಗಿಯವರು ಇಲ್ಲಿ ಮೂರ್ತಿ ನಿರ್ಮಿಸಲು ಒಪ್ಪಿಕೊಂಡಿದ್ದಾರೆ, ಕಾಕತಾಳೀಯವೆಂಬಂತೆ ಶಿಲ್ಪಿ ಅರುಣ ಅವರ ತಾತ ಬಸವಣ್ಣಾಚಾರ್ಯ ಅವರು ಸುಮಾರು 60-65 ವರ್ಷಗಳ ಹಿಂದೆ ಮುಕ್ತಿಮಂದಿರ ಕ್ಷೇತ್ರದಲ್ಲಿ ವಿಶ್ವಶಕ್ತಿ, ಸರ್ವಧರ್ಮಗಳ ವಿಶ್ವ ಮತಾಚಾರ್ಯರು, ಪಾರ್ವತಿ ಪರಮೇಶ್ವರ ಹಾಗೂ ಲಿಂ.ಜ. ವೀರಗಂಗಾಧರ ಶ್ರೀಗಳು, ಈಶ್ವರ ಲಿಂಗವನ್ನು ತಲೆಯ ಮೇಲೆ ಹೊತ್ತಿರುವ ಮೂರ್ತಿಗಳನ್ನು ಕೆತ್ತನೆ ಮಾಡಿರುವುವುದು ಗಮನಾರ್ಹ.
ಇದೀಗ ಅವರ ಮೊಮ್ಮಗ ಅರುಣ ಯೋಗಿಯಿಂದ ದೊಡ್ಡ ಪ್ರಮಾಣದ ಕಾರ್ಯ ನಡೆಯಲಿದೆ. ಅರುಣ್ ಯೋಗಿ ಅವರಿಂದ ಲಿಂ. ಜಗದ್ಗುರುಗಳ ಮೂರ್ತಿ ನಿರ್ಮಾಣವಾಲಿರುವುದು ವಿಶೇಷವಾಗಿದ್ದು, ಈ ಪ್ರತಿಮೆ ಸ್ಥಾಪನೆಯು ಧರ್ಮ, ಪರಂಪರೆ ಮತ್ತು ಭಕ್ತಿಯ ಪ್ರತಿರೂಪವಾಗಿ ತಲೆಮಾರುಗಳಿಗೆ ಪ್ರೇರಣೆಯಾಗಲಿದೆ ಎಂದು ನುಡಿದರು.
ನಮ್ಮ ತಾತ ರಂಭಾಪುರಿ ಜಗದ್ಗುರುಗಳ ಭಕ್ತರಾಗಿದ್ದು, ಅವರು ಮುಕ್ತಿಮಂದಿರದಲ್ಲಿ ಈ ಹಿಂದೆ ಅನೇಕ ಮೂರ್ತಿಗಳನ್ನು ನಿರ್ಮಿಸಿರುವುದು ಈಗಲೂ ಸಾಕ್ಷೀಕರಿಸಬಹುದಾಗಿದೆ. ಇದೀಗ ಲಿಂ.ವೀರಗಂಗಾಧರ ಜಗದ್ಗುರುಗಳ ಮೂರ್ತಿ ನಿರ್ಮಿಸುವ ಸೌಭಾಗ್ಯ ದೊರೆತಿರುವದು ಶ್ರೀಗಳ ಕೃಪೆಯಾಗಿದೆ. ಬೇಡಿಕೆಗೆ ತಕ್ಕಂತೆ ನಿಗದಿತ ವೇಳೆಯಲ್ಲಿ ಮೂರ್ತಿಯನ್ನು ಸಿದ್ಧಪಡಿಸುವ ಗುರುತರ ಜವಾಬ್ದಾರಿಯನ್ನು ಭಕ್ತಿಯಿಂದ, ಪ್ರಾಮಾಣಿಕವಾಗಿ ಮಾಡುತ್ತೇನೆ.
– ಅರುಣ ಯೋಗಿ.
ಹೆಸರಾಂತ ಶಿಲ್ಪಿ, ಮೈಸೂರು.



