ಬೆಂಗಳೂರು: ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳು ಮತದಾರರ ಪಟ್ಟಿಗೆ ಸೇರ್ಪಡೆಯಾದರೆ ಅದು ದೇಶದ ಭದ್ರತೆಗೆ ಅಪಾಯಕಾರಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕಳ್ಳ ಮತದಾರರನ್ನು ಸೇರಿಸಲು ಅವಕಾಶ ನೀಡಬಾರದು ಎಂದು ಹೇಳಿದರು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಹಲವು ಮಂದಿ ಕರ್ನಾಟಕಕ್ಕೆ ಬಂದಿದ್ದು,
ಅವರು ಮತದಾರರ ಪಟ್ಟಿಗೆ ಸೇರಿದ್ದರೆ ಖಾಯಂ ನಾಗರಿಕರಾಗುವ ಸಾಧ್ಯತೆ ಇದೆ. ಇದು ದೇಶದ ಭದ್ರತೆಗೆ ಗಂಭೀರ ಅಪಾಯ ಉಂಟುಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಈ ವಿಚಾರದ ಕುರಿತು ಕಾರ್ಯಾಗಾರದಲ್ಲಿ ಚರ್ಚೆ ನಡೆದಿದ್ದು, ಅದರಲ್ಲಿ ತಾವೂ ಭಾಗವಹಿಸಿದ್ದಾಗಿ ಅವರು ತಿಳಿಸಿದರು.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ನಾನು ಸಮಾಜವಾದಿ, ಜಾತಿವಾದಿ ಅಲ್ಲ; ಕುಟುಂಬವಾದಿ ಅಲ್ಲ”ಎಂದು ಹೇಳಿದ ಸಿದ್ದರಾಮಯ್ಯ ಅವರು ತಮ್ಮ ಮಗನನ್ನೂ ನೋಡಿಕೊಳ್ಳುವಂತೆ ಕೇಳಿದ್ದಾರೆ ಎಂದು ಟೀಕಿಸಿದರು.
“ಇಷ್ಟು ದಿನ ಅವರನ್ನು ನೋಡಿಕೊಂಡಿದ್ದೇವೆ. ಈಗ ಅವರ ಮಗನನ್ನೂ ನೋಡಿಕೊಳ್ಳಬೇಕು. ನಾಳೆ ಮೊಮ್ಮಗನನ್ನೂ ನೋಡಿಕೊಳ್ಳಿ ಎಂದರೆ ಇದು ರಾಜರ ಆಡಳಿತವೇ?” ಎಂದು ಪ್ರಶ್ನಿಸಿದರು.
ಹಿಂದೆ ರಾಜರು ತಮ್ಮ ನಂತರ ಮಗನನ್ನೇ ಉತ್ತರಾಧಿಕಾರಿಯಾಗಿ ಘೋಷಿಸುತ್ತಿದ್ದರು. ಆದರೆ ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಜಶಾಹಿ ವ್ಯವಸ್ಥೆಯನ್ನು ರದ್ದು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ತಂದರು. ಈಗ ಕುಟುಂಬ ರಾಜಕಾರಣಕ್ಕೆ ಉತ್ತೇಜನ ನೀಡುವುದು ಅಂಬೇಡ್ಕರ್ ಅವರ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.



