ವಿಜಯಸಾಕ್ಷಿ ಸುದ್ದಿ, ಧಾರವಾಡ: 2025‑26ನೇ ಸಾಲಿನಲ್ಲಿ, ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ವಿತರಿಸಲು ಒಟ್ಟು 14 ರೈತ ಸಂಪರ್ಕ ಕೇಂದ್ರಗಳು ಹಾಗೂ 13 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟು 27 ಬೀಜ ವಿತರಣಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯಿಂದ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ ವಿತರಿಸುವ ವಿವಿಧ ಬೀಜಗಳನ್ನು ರೈತರಿಗೆ ವಿತರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಉತ್ತಮ ಮಳೆ ಹೋಗಿದೆ, ಹಿಂಗಾರು ಬಿತ್ತನೆ ಪ್ರಾರಂಭವಾಗಿದೆ. ಕೃಷಿ ಇಲಾಖೆಯು ಹಿಂಗಾರು ಹಂಗಾಮಿಗೆ ಕಡಲೆ, ಗೋಧಿ, ಜೋಳ, ಮೆಕ್ಕೆಜೋಳ, ಶೇಂಗಾ ಹಾಗೂ ವಿವಿಧ ಬೆಳೆಗಳ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆಯಬೇಕೆಂದು ಹೇಳಿದರು.
ರೈತರು ಕಡಲೆ, ಗೋಧಿ, ಜೋಳ, ಮೆಕ್ಕೆಜೋಳ, ಶೇಂಗಾ ಹಾಗೂ ವಿವಿಧ ಬೆಳೆಗಳನ್ನು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುತ್ತಾರೆ. ಹಾಗಾಗಿ ಇಲಾಖೆ ಮಂಡಿದ ಸಹಾಯಧನ ಅಡಿ ಬೀಜ ವಿತರಣೆ ಮಾಡಲು ಒಟ್ಟು 29,906 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ವಿವಿಧ ಇನ್ನಿತರೆ ಬೀಜ ಉತ್ಪಾದನಾ ಸಂಸ್ಥೆಗಳ ಬೀಜಗಳನ್ನು ಎಲ್ಲ ಬೀಜ ವಿತರಣಾ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು ವಿತರಣೆ ಪ್ರಾರಂಭವಾಗಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎನ್. ಎಚ್. ಕೋನರಡ್ಡಿ, ಪ್ರಭಾರ ಜಿಲ್ಲಾಧಿಕಾರಿ, ಜಿ. ಪಂ ಸಿಇಓ ಭುವನೇಶ ಪಾಟೀಲ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಕೃಷಿ ಇಲಾಖೆ ಜಂಟಿ ನಿದೇಶಕ ಮಂಜುನಾಥ ಅಂಗ್ರವಳ್ಳಿ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ರೈತ ಮುಖಂಡರು, ರೈತರು ಇದ್ದರು.



