ವಿಜಯಸಾಕ್ಷಿ ಸುದ್ದಿ, ಗದಗ: ಬಿಜೆಪಿ ತತ್ವ-ಸಿದ್ಧಾಂತದ ಪಕ್ಷ. ಇದಕ್ಕೆ ಕೇವಲ ರಾಜಕೀಯ ಅಧಿಕಾರವೇ ಮುಖ್ಯವಲ್ಲ, ದೀನ-ದಲಿತರ ಸೌಲಭ್ಯ ವಂಚಿತ ಜನರ ಸೇವೆಯೇ ಬಿಜೆಪಿಯ ಧರ್ಮ ಎಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.
ಅವರು ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸೇವಾ ಪಾಕ್ಷಿಕ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂಘಟನೆ, ಸೇವೆ, ಅಭಿವೃದ್ಧಿ ಬಿಜೆಪಿಯ ಮೂಲಮಂತ್ರ. ಆ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನವಾದ ಸೆ. 17ರಿಂದ ಮಹಾತ್ಮ ಗಾಂಧಿ ಜನ್ಮದಿನವಾದ ಅಕ್ಟೋಬರ್ 2ರವರೆಗೆ ದೇಶಾದ್ಯಂತ ಸಾಮಾಜಿಕ ಸೇವಾ ಕಾರ್ಯಾಕ್ರಮಗಳನ್ನು ಹಮ್ಮಿಕೊಂಡಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ಈ ಮಹಾನ್ ನಾಯಕರ ಜನ್ಮದಿನವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಬಿಜೆಪಿಯ ಪ್ರತಿ ಕಾರ್ಯಕರ್ತನು ಸಮರ್ಪಣಾಭಾವದಿಂದ ಸೇವಾ ಕಾರ್ಯಗಳನ್ನ ಕೈಗೊಳ್ಳುವಂತೆ ಕರೆ ನೀಡಿದರು.
ಅಭಿಯಾನದ ಜಿಲ್ಲಾ ಸಂಚಾಲಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ಜಿಲ್ಲೆಯ ಪ್ರತಿ ತಾಲೂಕು, ಹೋಬಳಿ, ಪಟ್ಟಣ ಹಾಗೂ ಗ್ರಾಮ ಮಟ್ಟದ ಎಲ್ಲ ಹಂತಗಳಲ್ಲಿ ಎಲ್ಲ ಸೇವಾ ಕಾರ್ಯಗಳನ್ನ ಕೈಗೊಳ್ಳಲು ಮಂಡಲ ಸೇವಾ ತಂಡಗಳನ್ನ ರಚಿಸಲಾಗಿದ್ದು, ಪ್ರತಿ ಕಾರ್ಯಕರ್ತನೂ ಸೇವೆ ಸಲ್ಲಿಸುವ ಮುಖಾಂತರ ಸಮಾಜದ ಹಾಗೂ ನಾಡಿನ ಋಣವನ್ನ ತೀರಿಸಲು ಶ್ರಮಿಸಬೇಕು ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಉಮೇಶಗೌಡ ಪಾಟೀಲ, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್. ಕರೀಗೌಡ್ರ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಕ್ಕಿರೇಶ ರಟ್ಟಿಹಳ್ಳಿ ಉಪಸ್ಥೀತರಿದ್ದರು. ಬಿಜೆಪಿ 9 ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಎಸ್.ಟಿ. ಮೋರ್ಚಾ ಅಧ್ಯಕ್ಷ ಈಶ್ವರಪ್ಪ ರಂಗಪ್ಪನವರ, ಒಬಿಸಿ ಮೋರ್ಚಾ ಅಧ್ಯಕ್ಷ ಸಿದ್ದೇಶ ಹೂಗಾರ, ಮಂಡಲ ಅಧ್ಯಕ್ಷ ನಾಗನಗೌಡ ತಿಮ್ಮನಗೌಡ್ರ, ಉಮೇಶ ಮಲ್ಲಾಪೂರ, ಅಂದಪ್ಪ ಹಾರೂಗೇರಿ, ಸೋಮಶೇಖರ ಚರೇದ, ಬೂದಪ್ಪ ಹಳ್ಳಿ, ಸುರೇಶ ಮರಳಪ್ಪನವರ, ಜಿಲ್ಲಾ ಪ್ರಕೋಷ್ಠ ಸಂಯೋಜಕ ಶಶಿಧರ ದಿಂಡೂರ, ಸಹ ಸಂಯೋಜಕ ರಮೇಶ ಸಜ್ಜಗಾರ, ಸೇವಾ ಪಾಕ್ಷಿಕ ಅಭಿಯಾನ ಜಿಲ್ಲಾ ತಂಡದ ಸದಸ್ಯರಾದ ರಾಮಪ್ಪ ವಕ್ಕರ, ಕೆ.ಪಿ. ಕೋಟಿಗೌಡ್ರ, ಸೇವಾ ಪಾಕ್ಷಿಕ ಜಿಲ್ಲಾ ಹಾಗೂ ಮಂಡಲ ತಂಡಗಳ ಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿ, ಜಿಲ್ಲೆಯ 9 ಮಂಡಲ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ವೋಕಲ್ ಫಾರ್ ಲೋಕಲ್ ಮೇಳ, ಸ್ವಚ್ಛತಾ ಅಭಿಯಾನ, ಸಸಿ ನೆಡುವುದು, ದಿವ್ಯಾಂಗರಿಗೆ ಹಾಗೂ ವಿಶೇಷ ಸಾಧನಾ ವ್ಯಕ್ತಿಗಳಿಗೆ ಸನ್ಮಾನ, ಚಿತ್ರಕಲಾ ಸ್ಪರ್ಧೆ, ನಮೋ ಮ್ಯಾರಾಥಾನ್, ವಿಚಾರ ಸಂಕೀರ್ಣ, ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.



