HomeArt and Literatureಶಿವಶಿವ ಎಂದರೆ ಭಯವಿಲ್ಲ...

ಶಿವಶಿವ ಎಂದರೆ ಭಯವಿಲ್ಲ…

For Dai;y Updates Join Our whatsapp Group

Spread the love

ನಮ್ಮ ದೇಶದಲ್ಲಿ ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಪ್ರಮುಖವಾದ ಹಬ್ಬಗಳಲ್ಲಿ ಮಹಾ ಶಿವರಾತ್ರಿ ಒಂದಾಗಿದೆ. ಈ ಹಬ್ಬವನ್ನು ಮಾರ್ಚ್ ತಿಂಗಳ ಮಾಘ ಮಾಸದ ತ್ರಯೋದಶಿಯಂದು ಆಚರಿಸಲಾಗುತ್ತದೆ.

ಶಿವನಿಗೆ ಅತ್ಯಂತ ಪ್ರಿಯವಾದ ದಿನ ಮಹಾ ಶಿವರಾತ್ರಿ. ಈ ಮಹಾಶಿವರಾತ್ರಿಯಂದು ಶಿವನ ನಾಮಸ್ಮರಣೆಯೊಂದಿಗೆ ಜಾಗರಣೆ ಮಾಡುತ್ತಾರೆ. ಉಪವಾಸ ವೃತ ಕೈಗೊಳ್ಳುತ್ತಾರೆ. ಶಿವರಾತ್ರಿಯಂದು ಕೈಲಾಸದಲ್ಲಿರುವ ಪರಶಿವನನ್ನು ಜನರು ಭಕ್ತಿಯಿಂದ ಪೂಜಿಸುತ್ತಾರೆ. ಶಂಭೋಶಂಕರನನ್ನು ನೆನೆದು ಜೀವನವನ್ನು ಪಾವನ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಹಬ್ಬಗಳನ್ನು ಹಗಲಿನಲ್ಲಿ ಆಚರಿಸಿದರೆ, ಶಿವರಾತ್ರಿಯನ್ನು ರಾತ್ರಿಯಲ್ಲಿ ಆಚರಣೆ ಮಾಡಲಾಗುತ್ತದೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ, ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಕರುಣಿಸು ಎಂದು ಶಿವನನ್ನು ಬೇಡುವ ಈ ಶುಭಗಳಿಯೇ ಶಿವರಾತ್ರಿ.

ಶಿವನು ಅಜ್ಞಾನದ ಅಂಧಕಾರದಲ್ಲಿ ಸಂಚರಿಸಿ ಸುಜ್ಞಾನದ ಸುಧೆಯನ್ನು ಹರಡುತ್ತಾನೆ ಎಂಬ ನಂಬಿಕೆ ಇದೆ. ಶಿವನಿಗೆ ಬಿಲ್ವಪತ್ರ ಎಂದರೆ ಪ್ರಿಯ. ಬಿಲ್ವ ಪತ್ರದ ದಳ ಹೃದಯವನ್ನು ಹೋಲುತ್ತದೆ. ಶಿವಲಿಂಗ ಪರಮಾತ್ಮನ ಪ್ರತೀಕವಾಗಿದ್ದು, ಇವೆರಡರ ಸಮ್ಮಿಲನದಿಂದ ಆತ್ಮ-ಪರಮಾತ್ಮನಾಗುತ್ತಾನೆ. ಶಿವರಾತ್ರಿ ದಿನ ಶಿವಲಿಂಗಕ್ಕೆ ಬಿಲ್ವಾರ್ಚನೆ ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.

ಶಿವನು ಸರಳ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶಗಳ ಪ್ರತೀಕವಾಗಿದ್ದಾನೆ. ಭಕ್ತಿಯಿಂದ ಧ್ಯಾನ ಮಾಡಿದರೆ ಶಿವನು ಪ್ರಸನ್ನಗೊಳ್ಳುತ್ತಾನೆ ಎಂಬ ನಂಬಿಕೆ ಇದೆ. ಕೈಲಾಸ ವಾಸಿ ಶಿವನಿಗೆ ಅತ್ಯಂತ ಪ್ರೀತಿಯ ದಿನ ತನ್ನನ್ನು ನಿಷ್ಠೆಯಿಂದ ಪೂಜಿಸಿದವರಿಗೆ ಇಷ್ಟಾರ್ಥಗಳನ್ನು ನೀಡುವುದಾಗಿ ಶಿವನು ಪಾರ್ವತಿಯಲ್ಲಿ ಹೇಳಿದ್ದಾನೆ ಎನ್ನುವುದು ಶಿವಪುರಾಣದಲ್ಲಿರುವ ಉಲ್ಲೇಖ.

ಪರ್ವತ ರಾಜನ ಮಗಳಾದ ಪಾರ್ವತಿ ಈ ದಿನದಂದು ರಾತ್ರಿಯಿಡೀ ಶಿವನಾಮವನ್ನು ಭಕ್ತಿಯಿಂದ ಪಠಿಸುತ್ತಾ ಶಿವನನ್ನು ಮೆಚ್ಚಿ ವಿವಾಹವಾದ ದಿನ. ಈ ದಿನವನ್ನು ಶಿವ-ಪಾರ್ವತಿ ಕಲ್ಯಾಣೋತ್ಸವ ದಿನ ಎಂದು ಕರೆಯಲಾಗುತ್ತದೆ. ಶಿವನು ರುದ್ರ ತಾಂಡವವಾಡಿದ ರಾತ್ರಿಯೂ ಇದೇ ಎನ್ನಲಾಗಿದೆ.

ಈ ದೇವತೆಗಳು ಹಾಗೂ ಅಸುರರು ಸಮುದ್ರ ಮಂಥನ ನಡೆದು ಹಾಲಾಹಲ ಉದ್ಭವಿಸಿದಾಗ ಅದನ್ನು ಶಿವನು ಕುಡಿದನು. ವಿಷ ಗಂಟಲೊಳಗೆ ಹೋಗಬಾರದೆಂದು ಪಾರ್ವತಿಯು ಶಿವನ ಗಂಟಲನ್ನು ಬಿಗಿ ಹಿಡಿದು ಇಡೀ ರಾತ್ರಿ ತಡೆದಳು ಎಂಬುದು ಶಿವ ಪುರಾಣದಲ್ಲಿ ಉಲ್ಲೇಖವಿದೆ. ಅಂದಿನಿಂದ ಶಿವನಿಗೆ ನೀಲಂಕಠ ಎಂಬ ನಾಮಧೇಯವಾಯಿತು. ಶಿವನು ಆಭರಣ ಪ್ರಿಯನು ಅಲ್ಲ, ಅಲಂಕಾರ ಪ್ರಿಯನೂ ಅಲ್ಲದೆ, ಭಸ್ಮ ಪ್ರಿಯನಾಗಿದ್ದಾನೆ. ಭಸ್ಮವನ್ನು ಬಳಿದುಕೊಂಡು ಹುಲಿ ಚರ್ಮವನ್ನು ಸುತ್ತಿಕೊಂಡು ಸ್ಮಶಾನದಲ್ಲಿರುವ ಅಮೋಘ ಶಕ್ತಿಯೇ ಶಿವನಾಗಿದ್ದಾನೆ.

ಈ ದಿನ ಹೆಣ್ಣುಮಕ್ಕಳು ಶಿವಗುಣರೂಪಿಯಾಗಿ, ಗುಣಗಳುಳ್ಳ ಪತಿಗಾಗಿ ಪ್ರಾರ್ಥಿಸುತ್ತಾರೆ. ಹಾಗೆ ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪೂಜಿಸುತ್ತಾರೆ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ ಇಷ್ಠಾರ್ಥಗಳು ಈಡೇರಿ ಸುಖ, ಶಾಂತಿ, ನೆಮ್ಮದಿ ಉಂಟಾಗುವುದು ಎಂಬ ನಂಬಿಕೆ ಇದೆ. ಅದೆ ರೀತಿ ಹಳ್ಳಿಗಳಲ್ಲಿ ಮಹಿಳೆಯರು ಉತ್ತರಾಣಿ ಕಡ್ಡಿಯಿಂದ ದೀಪವನ್ನು ಬೆಳಗಿ ಶಿವನ ಕೃಪಗೆ ಪಾರ್ಥರಾಗುತ್ತಾರೆ.

ಪ್ರತಿ ವರ್ಷ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷದ ತ್ರಯೋದಶಿಯಂದು ರಾತ್ರಿ ಸಮಯದಲ್ಲಿ ಶಿವ-ಪಾರ್ವತಿಯರು ಲೋಕ ಸಂಚಾರ ಮಾಡುತ್ತಾ ಶಿವಲಿಂಗಗಳಿಗೆ ಭೇಟಿ ನೀಡಿ ಸಂಕ್ರಮಣಗೊಳಿಸುತ್ತಾರೆ. ಈ ರಾತ್ರಿ ಯಾರು ಶಿವನ ನಾಮ ಜಪ ಮಾಡುತ್ತಾರೋ ಅವರ ಪಾಪ ತೊಳೆದು ಪುಣ್ಯವನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇದೆ. ದೇವರ ದೇವ ಮಹಾದೇವನಾದ ಶಿವನನ್ನು ಬ್ರಹ್ಮ, ವಿಷ್ಣು ಎಲ್ಲರೂ ಪೂಜಿಸುತ್ತಾರೆ.

ರಾತ್ರಿಯು ಅಜ್ಞಾನದ ಸಂಕೇತ. ಈ ವೇಳೆ ನಿದ್ದೆ ಮಾಡದೆ ಭಕ್ತಿಯಿಂದ ಪೂಜಿಸಿದರೆ ತಿಳುವಳಿಕೆಯ ಕಡೆ ತಿರುಗಿದಂತೆ. ಜಾಗರಣೆ ಎಂದರೆ ಜಾಗೃತವಾಗಿರುವುದು ಎಂದರ್ಥ. ರಾತ್ರಿ ಎನ್ನುವುದು ತಮೋಗುಣದ ಪ್ರತೀಕವಾಗಿದೆ. ಈ ಸಮಯದಲ್ಲಿ ಎಚ್ಚರವಾಗಿರುವುದರಿಂದ ನಮ್ಮಲ್ಲಿರುವ ಆಲಸ್ಯ, ಅಹಂಕಾರ ಗುಣಗಳು ದೂರವಾಗುತ್ತವೆ.

ಈ ದಿನದಂದು ಕಾಶಿ ವಿಶ್ವನಾಥ, ರಾಮೇಶ್ವರ, ಮಹಾಬಲೇಶ್ವರ, ಗೋಕರ್ಣನಾಥೇಶ್ವರ, ಬನವಾಸಿ ಮಧುಕೇಶ್ವರ, ಮುರಡೇಶ್ವರ ಹೀಗೆ ರಾಜ್ಯ, ದೇಶಾದ್ಯಂತ ಶಿವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಶಿವನಿಗೆ ಹಾಲು, ಮೊಸರು, ತುಪ್ಪ ಹಾಗೂ ಜೇನುತುಪ್ಪದಲ್ಲಿ ಅಭಿಷೇಕ ಮಾಡುವ ಪದ್ಧತಿ ಇದೆ. ಈ ದಿನ ಪ್ರತಿಯೊಬ್ಬರೂ ರಾತ್ರಿಯಿಡಿ ಜಾಗರಣೆ ಮಾಡಿ ನಸುಕಿನ ಜಾವದಲ್ಲಿ ಮಡಿವುಡಿಯಿಂದ ಶಿವ ದೇವಾಲಯಗಳಿಗೆ ಹೋಗಿ ಶಿವನಿಗೆ ಪೂಜೆ ಸಲ್ಲಿಸುತ್ತಾರೆ. ಶಿವನು ತನ್ನ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನು ಕರುಣಿಸುತ್ತಾನೆ. ಶಿವನು ಈ ಲೋಕದ ಎಲ್ಲ ಜೀವರಾಶಿಗಳಿಗೆ ಸುಖ, ನೆಮ್ಮದಿ, ಸಮೃದ್ಧಿ, ಸಂಪತ್ತು ಕರುಣಿಸಲಿ, ಮಳೆ-ಬೆಳೆ ಚನ್ನಾಗಿ ಬರಲಿ ಎಂದು ಶಿವನಲ್ಲಿ ಮತ್ತೊಮ್ಮೆ ಪ್ರಾರ್ಥಿಸೋಣ.

– ಎಸ್.ಕೆ. ಆಡಿನ.

ಶಿಕ್ಷಕರು, ಹೊಳೆಆಲೂರ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!