ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾದ ‘ರಾಮಾಯಣ’ ಸಿನಿಮಾ ಈಗ ಮತ್ತೊಂದು ಹಂತಕ್ಕೆ ಕಾಲಿಟ್ಟಿದೆ. ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್ ಈಗಾಗಲೇ ಚಿತ್ರದ ಎರಡನೇ ಭಾಗದ ಚಿತ್ರೀಕರಣಕ್ಕೆ ಸೆಟ್ ಸೇರಿಕೊಂಡಿದ್ದಾರೆ.
ನಿರ್ದೇಶಕ ನಿತೇಶ್ ತಿವಾರಿ ರೂಪಿಸುತ್ತಿರುವ ಈ ಮಹತ್ವಾಕಾಂಕ್ಷಿ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಮೊದಲ ಭಾಗದ ಶೂಟಿಂಗ್ ಪೂರ್ಣಗೊಂಡಿದೆ. ಈಗ ‘ರಾಮಾಯಣ 2’ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ.
ಈ ಭಾಗದಲ್ಲಿ ಶ್ರೀರಾಮ ಮತ್ತು ಹನುಮಂತನ ಭೇಟಿಯ ದೃಶ್ಯಗಳು ವಿಶೇಷ ಆಕರ್ಷಣೆಯಾಗಲಿವೆ. ಹನುಮಂತನ ಪಾತ್ರವನ್ನು ಬಾಲಿವುಡ್‌ನ ಹಿರಿಯ ನಟ ಸನ್ನಿ ಡಿಯೋಲ್ ನಿರ್ವಹಿಸುತ್ತಿದ್ದು, ಅವರು ಮಾರ್ಚ್ 20ರ ನಂತರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಚಿತ್ರದಲ್ಲಿ ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ಮಾಡುತ್ತಿದ್ದು, ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಭಾರೀ ಗ್ರಾಫಿಕ್ಸ್ ಮತ್ತು ದೃಶ್ಯ ವೈಭವದೊಂದಿಗೆ ಸಿನಿಮಾ ಮೂಡಿ ಬರುತ್ತಿದೆ.
ನಿರ್ಮಾಪಕ ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಹಾಲಿವುಡ್ ಮಟ್ಟದ ತಂತ್ರಜ್ಞಾನ ಬಳಸಲಾಗುತ್ತಿದೆ. ಅಲ್ಲದೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಚಿತ್ರದ ಫೈನಲ್ ಕಟ್ ವೀಕ್ಷಿಸಿ ಸಲಹೆ ನೀಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಈ ನಡುವೆ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಚಿತ್ರದ ಚಿತ್ರೀಕರಣ ಮುಂದೂಡಲ್ಪಟ್ಟಿರುವುದರಿಂದ, ರಣಬೀರ್ ಕಪೂರ್ ತಮ್ಮ ಸಂಪೂರ್ಣ ಗಮನವನ್ನು ಈಗ ‘ರಾಮಾಯಣ 2’ ಕಡೆಗೆ ಹರಿಸಿದ್ದಾರೆ.



