ಭೋಪಾಲ್: ಇವಿ ಚಾರ್ಜಿಂಗ್ ಪಾಯಿಂಟ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಭೀಕರ ಅಗ್ನಿ ಅವಘಡ ಸಂಭವಿಸಿ 7 ಮಂದಿ ಸಜೀವ ದಹನಗೊಂಡ ಘಟನೆ ಇಂದೋರ್ನಲ್ಲಿ ನಡೆದಿದೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಬಂಗಾಳಿ ಸ್ಕ್ವೇರ್ ಸಮೀಪದ ವಸತಿ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ರಾತ್ರಿಯಿಡೀ ಚಾರ್ಜ್ ಮಾಡಲು ಎಲೆಕ್ಟ್ರಿಕ್ ಕಾರನ್ನು ಪ್ಲಗ್ ಇನ್ ಮಾಡಲಾಗಿದ್ದು, ಈ ವೇಳೆ ಚಾರ್ಜಿಂಗ್ ಪಾಯಿಂಟ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಅದರಿಂದ ಬೆಂಕಿ ಮನೆಯೊಳಗೆ ಸಂಗ್ರಹಿಸಿದ್ದ ಎಲ್ಪಿಜಿ ಸಿಲಿಂಡರ್ಗಳಿಗೆ ಹಬ್ಬಿ, ನಾಲ್ಕು ಸಿಲಿಂಡರ್ಗಳು ಸ್ಫೋಟಗೊಂಡಿವೆ. ಪರಿಣಾಮ ಬೆಂಕಿ ಮೂರು ಅಂತಸ್ತಿನ ಕಟ್ಟಡವನ್ನೇ ಆವರಿಸಿದೆ.
ಈ ದುರ್ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳೀಯರು ಅಗ್ನಿಶಾಮಕ ದಳ ಬರುವ ಮುನ್ನ ಮೂವರನ್ನು ರಕ್ಷಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.



