Homecultureಧರ್ಮ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ : ನೊಣವಿನಕೆರೆ ಶ್ರೀಗಳು

ಧರ್ಮ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ : ನೊಣವಿನಕೆರೆ ಶ್ರೀಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪ್ರತಿಯೊಬ್ಬರೂ ತಮ್ಮ ಬದುಕಿನುದ್ದಕ್ಕೂ ದೇವರು, ಧರ್ಮಕಾರ್ಯ, ದಾನ, ದಯೆ ಮತ್ತು ಮಾನವೀಯತೆ ರೂಢಿಸಿಕೊಳ್ಳಬೇಕು. ಧರ್ಮ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರಮಠದ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮಿಗಳು ಹೇಳಿದರು.

ಅವರು ಸಮೀಪದ ಗುಲಗಂಜಿಕೊಪ್ಪ ಗ್ರಾಮ ವ್ಯಾಪ್ತಿಯ ಶ್ರೀ ದುಂಡಿಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ನಮ್ಮ ಹಿರಿಯರು ತೋರಿದ ಸನ್ಮಾರ್ಗ, ಸಂಸ್ಕೃತಿ, ಆಚರಣೆ, ಸಂಪ್ರದಾಯಗಳನ್ನು ಮರೆಯಬಾರದು. ಜಾತ್ರೆಗಳು ಜಾತಿ, ಧರ್ಮಗಳ ಎಲ್ಲೆ ಮೀರಿ ಪರಸ್ಪರರಲ್ಲಿ ಬಾಂಧವ್ಯ, ಸೌಹಾರ್ದತೆ, ಸ್ನೇಹ ಬೆಸೆಯುವ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ಸಂಗೀತ ಸೇವೆ, ಸರ್ವಧರ್ಮದ ಗುರುಗಳಿಂದ ಧರ್ಮ ಸಂದೇಶ ನೀಡುವಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದು ಶ್ಲಾಘನೀಯ ಎಂದರು.

ಮುಕ್ತಿಮಂದಿರ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮತ್ತು ಗಂಜಿಗಟ್ಟಿಯ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಅತ್ಯಂತ ಪವಿತ್ರ ಮತ್ತು ಜಾಗೃತ ಸ್ಥಳವಾಗಿರುವ ಶ್ರೀ ದುಂಡಿ ಬಸವೇಶ್ವರ ದೇವಸ್ಥಾನ ಪ್ರದೇಶದಲ್ಲಿ ಧರ್ಮ, ಶಿಕ್ಷಣ, ಸಂಸ್ಕಾರ ಮತ್ತು ಸಮಾಜ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಸಮಿತಿಯವರದ್ದಾಗಿದೆ. ಅದು ಈಡೇರಲು ಸರ್ವ ಭಕ್ತರ ಸಹಕಾರ ಅಗತ್ಯವಾಗಿದೆ ಎಂದರು.

ಧರ್ಮ ಸಮಾರಂಭದಲ್ಲಿ ಹೂವಿನಶಿಗ್ಲಿಯ ಚನ್ನವೀರ ಮಹಾಸ್ವಾಮಿಗಳು, ಕರೆವಾಡಿಮಠದ ಮಳೆಮಲ್ಲಿಕಾರ್ಜುನ ಶ್ರೀಗಳು ಉಪಸ್ಥಿತರಿದ್ದರು.

ಬೆಳಿಗ್ಗೆ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ನೊಣವಿನಕೆರೆ ಶ್ರೀಗಳ ಸಾನ್ನಿಧ್ಯದಲ್ಲಿ ನೆರವೇರಿದವು. ಜಾತ್ರಾ ಮಹೋತ್ಸವ ಅಂಗವಾಗಿ ಪ್ರಾತಃಕಾಲ ದೇವಸ್ಥಾನದಲ್ಲಿ ಗಣಪತಿಪೂಜೆ, ಹೋಮ-ಹವನಾದಿಗಳು, ಶ್ರೀ ದುಂಡಿಬಸವೇಶ್ವರನಿಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆಗಳು ಸಂಪ್ರದಾಯದಂತೆ ನಡೆದವು. ಬೆಳಿಗ್ಗೆ 10ಕ್ಕೆ ಶ್ರೀಮಠದ ಆವರಣದಲ್ಲಿ ಧಾರವಾಡ ಮತ್ತು ಗದುಗಿನ ವೈದ್ಯಕೀಯ ಸಂಸ್ಥೆಗಳಿಂದ ಡಾ.ಉಮೇಶ ಹಳ್ಳಿಕೇರಿ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು. ಇದರಲ್ಲಿ ನೂರಾರು ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಧರ್ಮಸಭೆಯ ಅಧ್ಯಕ್ಷತೆಯನ್ನು ದುಂಡಿಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಕೊಟಗಿ ವಹಿಸಿದ್ದರು. ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಬಸಣ್ಣ ಬೆಂಡಿಗೇರಿ, ಗ್ರಾ.ಪಂ ಅಧ್ಯಕ್ಷ ಅಣ್ಣಪ್ಪ ರಾಮಗೇರಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ, ಪದ್ಮರಾಜ ಪಾಟೀಲ, ಸೋಮಣ್ಣ ಬೆಟಗೇರಿ, ನಿಂಗನಗೌಡ್ರ ಹೊಸಗೌಡ್ರ, ನೀಲಪ್ಪಗೌಡ್ರ ದುರಗನಗೌಡ್ರ, ದುಂಡಪ್ಪ ರಾಯಣ್ಣವರ, ಕರಿಯಪ್ಪಗೌಡ ಹೊಸಗೌಡ್ರ, ಸುಧಾ ಮಾದರ, ಡಾ.ಉಮೇಶ ಹಳ್ಳಿಕೇರಿ, ಬಸಯ್ಯ ಕಾಡಣ್ಣವರ ಸೇರಿದಂತೆ ಗ್ರಾ.ಪಂ ಸದಸ್ಯರು, ಮಂಜುನಾಥ ಹೊಗೆಸೊಪ್ಪಿನ, ಈರಣ್ಣ ಅಂಕಲಕೋಟಿ, ಬಸಣ್ಣ ಗಾಂಜಿ, ಸಮಿತಿ ಸದಸ್ಯರು ಉಪಸ್ಥಿತರಿದ್ದರು. ನಿಂಗಪ್ಪ ಶಿವಬಸಣ್ಣವರ, ಶಿವಣ್ಣ ಕಟಗಿ, ಶಂಕ್ರಯ್ಯ ಪೂಜಾರ, ಬಸವರಾಜ ಅಂಗಡಿ ನಿರೂಪಿಸಿದರು.

ನಮ್ಮ ಭಾಗದಲ್ಲಿನ ಶ್ರದ್ಧಾ ಕೇಂದ್ರಗಳಾಗಿರುವ ಮುಕ್ತಿಮಂದಿರ ಮತ್ತು ದುಂಡಿಬಸವೇಶ್ವರ ಕ್ಷೇತ್ರದ ರಸ್ತೆಗಳ ಸುಧಾರಣೆಗಳಿಗೆ ಇರುವ ಸಮಸ್ಯೆಯನ್ನು ನಿವಾರಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೆ ಯಾತ್ರಿ ನಿವಾಸ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ.
– ಡಾ.ಚಂದ್ರು ಲಮಾಣಿ, ಶಾಸಕರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!