ಗದಗ: ಸಿದ್ದರಾಮಯ್ಯ ದೀರ್ಘಾವಧಿ ಮುಖ್ಯಮಂತ್ರಿ ಆಗಿ ದಾಖಲೆ ಬರೆಯುತ್ತಿರುವ ಹಿನ್ನಲೆಯಲ್ಲಿ, ಅವರ ಅಭಿಮಾನಿಗಳ ಸಂಭ್ರಮ ಹಳ್ಳಿ ಹಳ್ಳಿಗಳಿಗೂ ತಲುಪಿದೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಒದೇಗೋಳ ಗ್ರಾಮದಲ್ಲಿ ತಡರಾತ್ರಿ ಭರ್ಜರಿ ನಾಟಿಕೋಳಿ ಊಟದ ಔತಣಕೂಟ ಆಯೋಜಿಸಲಾಗಿತ್ತು.
ಸಿದ್ದರಾಮಯ್ಯ ಅಭಿಮಾನಿಗಳಿಂದ ಗ್ರಾಮಸ್ಥರಿಗೆ ವಿಶೇಷವಾಗಿ ನಾಟಿಕೋಳಿ ಸಾರು ಮತ್ತು ಜೋಳದ ರೊಟ್ಟಿ ವ್ಯವಸ್ಥೆ ಮಾಡಲಾಗಿತ್ತು. ಊಟದ ಸ್ಥಳದಲ್ಲಿ ನಾಟಿಕೋಳಿ ಸಾರಿನ ಘಮಘಮ ವಾಸನೆ ಹಬ್ಬಿ, ಗ್ರಾಮಸ್ಥರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
ಔತಣಕೂಟ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಬಳಿಕ ನೂರಾರು ಗ್ರಾಮಸ್ಥರು ಸಾಲುಗಟ್ಟಿ ನಿಂತು ನಾಟಿಕೋಳಿ ಸಾರು ಸವಿದು ಖುಷಿಪಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮ ಮಹಿಳೆಯರು, ಮಕ್ಕಳು ಸಹ ಭಾಗವಹಿಸಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. “ಸಿದ್ದರಾಮಯ್ಯ ಸಿಎಂ ಆಗಿರುವುದು ನಮ್ಮ ಹಳ್ಳಿಗೂ ಹಬ್ಬ” ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.



