‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯ ಹರಾಜಿನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದಕ್ಕೆ ಸನ್ರೈಸರ್ಸ್ ಲೀಡ್ಸ್ ತಂಡದ ಮಾಲಕಿ ಕಾವ್ಯ ಮಾರನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಒಡೆತನದಲ್ಲಿರುವ ಸನ್ರೈಸರ್ಸ್ ಲೀಡ್ಸ್ ತಂಡವು 27 ವರ್ಷದ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 1,90,000 ಪೌಂಡ್ (ಸುಮಾರು 2.34 ಕೋಟಿ ರೂ.) ನೀಡಿ ಖರೀದಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾಕಿಸ್ತಾನಿ ಆಟಗಾರರನ್ನು ಖರೀದಿಸುವುದಿಲ್ಲ ಎಂಬುದು ಬಹುಕಾಲದಿಂದಲೂ ನಡೆದುಬರುತ್ತಿದೆ. ಆದರೆ ಅದಕ್ಕೆ ವಿರುದ್ಧವಾಗಿ ಸನ್ರೈಸರ್ಸ್ ಲೀಡ್ಸ್ ತಂಡ ಅಬ್ರಾರ್ ಅಹ್ಮದ್ ಅವರನ್ನು ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ.
2009ರಿಂದ ಪಾಕಿಸ್ತಾನದ ಕ್ರಿಕೆಟಿಗರು ಐಪಿಎಲ್ನಲ್ಲಿ ಆಡುತ್ತಿಲ್ಲ. ಭಾರತ ಮತ್ತು ಪಾಕಿಸ್ತಾನ ತಂಡಗಳು ಸಾಮಾನ್ಯವಾಗಿ ಐಸಿಸಿ ಆಯೋಜಿಸುವ ಟೂರ್ನಿಗಳು ಹಾಗೂ ಏಷ್ಯಾಕಪ್ ಪಂದ್ಯಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
‘ದಿ ಹಂಡ್ರೆಡ್’ ಟೂರ್ನಿಯು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುವ ವಿಶಿಷ್ಟ ಕ್ರಿಕೆಟ್ ಸ್ಪರ್ಧೆಯಾಗಿದ್ದು, ಸಾಂಪ್ರದಾಯಿಕ ಟಿ20 ಕ್ರಿಕೆಟ್ಗೆ ಹೋಲಿಸಿದರೆ ವಿಭಿನ್ನ ನಿಯಮಗಳನ್ನು ಹೊಂದಿದೆ.
ಈ ಟೂರ್ನಿಯಲ್ಲಿ ಪ್ರತಿ ಇನ್ನಿಂಗ್ಸ್ಗೆ ಕೇವಲ 100 ಎಸೆತಗಳಿರುತ್ತವೆ. ಸಾಮಾನ್ಯವಾಗಿ ಸುಮಾರು 2.5 ಗಂಟೆಗಳೊಳಗೆ ಪಂದ್ಯ ಮುಗಿಯುತ್ತದೆ. 6 ಎಸೆತಗಳ ಬದಲು ಪ್ರತಿ 10 ಎಸೆತಗಳ ನಂತರ ಬೌಲಿಂಗ್ ಎಂಡ್ ಬದಲಾಗುತ್ತದೆ. ಒಬ್ಬ ಬೌಲರ್ ಸತತವಾಗಿ 5 ಅಥವಾ 10 ಎಸೆತಗಳನ್ನು ಎಸೆಯಬಹುದು. ಪಂದ್ಯದಲ್ಲಿ ಒಬ್ಬ ಬೌಲರ್ ಗರಿಷ್ಠ 20 ಎಸೆತಗಳನ್ನು ಮಾತ್ರ ಎಸೆಯಲು ಅವಕಾಶವಿರುತ್ತದೆ.
ಇನ್ನಿಂಗ್ಸ್ನ ಮೊದಲ 25 ಎಸೆತಗಳು ಪವರ್ಪ್ಲೇ ಆಗಿರುತ್ತದೆ. ಒಟ್ಟು 8 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಈ ಬಾರಿ ಜುಲೈ 21ರಿಂದ ಆಗಸ್ಟ್ 16ರವರೆಗೆ ಪಂದ್ಯಗಳು ನಡೆಯಲಿವೆ.



