ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಕ ವೃತ್ತಿ ಬಹು ಪವಿತ್ರವಾದ ವೃತ್ತಿಯಾಗಿದ್ದು, ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ್ ಅಭಿಪ್ರಾಯಪಟ್ಟರು.
ಅವರು ಎಸ್‌ಟಿಪಿಎಂಬಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ 21ನೇ ವರ್ಷದ ವಾರ್ಷಿಕೋತ್ಸವ `ಏಕವಂಶೀಯತ: ಫೋಲ್ಡ್’ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ತಾಯಿ ಪಾರ್ವತಿ ಮಕ್ಕಳ ಬಳಗ ಸಂಸ್ಥೆಯ ಉಪಾಧ್ಯಕ್ಷೆ ಜಯಲಕ್ಷ್ಮಿ ಮಹಾಂತಶೆಟ್ಟರ ಹಾಗೂ ಕಾರ್ಯದರ್ಶಿ ಜಯಲಕ್ಷ್ಮಿ ಗಡ್ಡದೇವರಮಠ ಮಾತನಾಡಿ, ವಿದ್ಯಾರ್ಥಿಗಳು ಗುರು-ಹಿರಿಯರ ಮಾತುಗಳನ್ನು ಕೇಳಿ ಬದುಕಿನಲ್ಲಿ ಸನ್ಮಾರ್ಗದಲ್ಲಿ ಸಾಗಿ ಜೀವನದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಸಾಗಬೇಕು. ಶ್ರಮಪಟ್ಟು ಓದಿ ಸಾಮಾನ್ಯರ ಗುಂಪಿನಿಂದ ಸಾಧಕರ ಗುಂಪಿಗೆ ಸೇರಬೇಕು. ಅದಕ್ಕಾಗಿ ಯೋಜನಾಬದ್ಧವಾಗಿ ರೂಪು-ರೇಷೆಗಳನ್ನು ಹಾಕಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಪಾಲಕ ಪ್ರತಿನಿಧಿಯಾಗಿ ವಿಜಯಾ ಕೆಂಚನಗೌಡ ಮಾತನಾಡಿದರು. ಮುಖ್ಯೋಪಾಧ್ಯಾಯ ಪ್ರಭುಗೌಡ ಯಕಿಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಸ್ವಾತಿ ಉದಯ ಪೈ ಶಾಲೆ ನಡೆದು ಬಂದ ದಾರಿ, ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸಾಧನೆಯ ಕುರಿತು ವರದಿ ಮಂಡಿಸಿದರು.
ಸಂಸ್ಥೆಯ ಅಧ್ಯಕ್ಷೆ ಸುವರ್ಣ ಬಾಯಿಬಹದ್ದೂರ ದೇಸಾಯಿ, ಶಾರಕ್ಕಾ ಮಹಾಂತಶೆಟ್ಟರ, ರೋಹಿಣಿಬಾಯಿ ಬಹದ್ದೂರದೇಸಾಯಿ, ಇಸಿಓ ರಾಘವೇಂದ್ರ ಜೋಶಿ, ಸಿಆರ್‌ಪಿ ಶ್ರೀನಿವಾಸ್ ಮತ್ತೂರ, ಡಾ. ಶಿವಾನಂದ ಹೂವಿನ ಉಪಸ್ಥಿತರಿದ್ದರು.
ನಂತರ ಶಾಲಾ ವಿದ್ಯಾರ್ಥಿಗಳಿಂದ ಶಿವನ ಭಕ್ತಿಯ ಪರಿ, ಯಕ್ಷಗಾನ, ಮೋಹಿನಿ ಅಟ್ಟಂ, ಭರತನಾಟ್ಯದಂತಹ ನೃತ್ಯ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ದೇಸಾಯಿ, ರೂಪಾ ನವಲೆ, ವೀಣಾ ಜಾಮನೂರ, ಲೀಲಾವತಿ ಬೆಳಗಟ್ಟಿ, ಸಿಮ್ರಾನ ನಾಡಗೆರ, ಆಶಾ ಜಾದವ, ಪವಿತ್ರಾ ಕಾರಬಾರಿ, ಶಿವಯೋಗಿ ವಾಲಿಶೆಟ್ಟರ, ಶ್ವೇತಾ ಅರಳಿ ಸೇರಿದಂತೆ ಶಿಕ್ಷಕಿಯರು, ಸಿಬ್ಬಂದಿಗಳು, ಪಾಲಕರು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಮಹಾರಾಜಪೇಟ ಸ್ವಾಗತಿಸಿದರು. ಮಂಜುಳಾ ಪಾಟೀಲ ನಿರೂಪಿಸಿದರು, ವಿನಾಯಕ್ ದೊಡ್ಡಮನಿ ವಂದಿಸಿದರು.



