ಮೈಸೂರು: ಪಾರಂಪರಿಕ ಕಟ್ಟಡಗಳ ತವರಾಗಿರುವ ಮೈಸೂರಿನಲ್ಲಿ, ನಗರ ಪರಂಪರೆ ಉಳಿಸುವ ಹೆಸರಿನಲ್ಲಿ ನಡೆಯುತ್ತಿರುವ ಟಾಂಗಾ ಸ್ಟ್ಯಾಂಡ್ ನಿರ್ಮಾಣ ಕೆಲಸವು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.
‘ಸ್ವದೇಶ ದರ್ಶನ 2.0’ ಯೋಜನೆಯಡಿ ನಗರದಲ್ಲಿ 10 ಸ್ಥಳಗಳಲ್ಲಿ ಟಾಂಗಾ ಸ್ಟ್ಯಾಂಡ್ ಸ್ಥಾಪಿಸಲು ಪಾಲಿಕೆ ಮುಂದಾಗಿದ್ದರೂ, ಅರಮನೆ ಮುಂಭಾಗದ ಚಾಮರಾಜೇಂದ್ರ ವೃತ್ತದ ಬಳಿ ಫುಟ್‌ಪಾತ್ ಮೇಲೆ ಸ್ಟ್ಯಾಂಡ್ ನಿರ್ಮಿಸಲಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆಯನ್ನು ಗಾಳಿಗೆ ತೂರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರು, ಪಾಲಿಕೆ ಆಯುಕ್ತರಿಗೆ ಮೈಸೂರು ನಗರದ ವಾಸ್ತವವೇ ಗೊತ್ತಿಲ್ಲ. ಎಸಿ ಹಾಕಿಕೊಂಡು ಕಚೇರಿಯಲ್ಲಿ ಕೂತಿರುವ ಅವರಿಗೆ ಪಾದಚಾರಿ ಮಾರ್ಗ ಯಾವುದು, ಖಾಲಿ ಜಾಗ ಯಾವುದು ಎಂಬುದು ಹೇಗೆ ತಿಳಿಯುತ್ತದೆ? ಸಿಎಂ ಬಂದಾಗ ಹೂಗುಚ್ಚ ಕೊಡುವುದೇ ಅವರ ಕೆಲಸವಲ್ಲ. ಮೊದಲು ನಗರದಲ್ಲಿ ಓಡಾಡಿ ಸಮಸ್ಯೆ ಅರ್ಥ ಮಾಡಿಕೊಳ್ಳಲಿ. ಕೂಡಲೇ ಈ ಕಾಮಗಾರಿ ನಿಲ್ಲಿಸಿ, ಹಾಳಾದ ರಸ್ತೆ ಸರಿಪಡಿಸಲಿ’ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಪರಂಪರೆ ಉಳಿಸುವ ಹೆಸರಿನಲ್ಲಿ ನಡೆಯುತ್ತಿರುವ ಈ ಅವೈಜ್ಞಾನಿಕ ಕಾಮಗಾರಿ ಮೈಸೂರಿಗರ ನಿದ್ದೆಗೆಡಿಸಿದೆ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಪರ್ಯಾಯ ಜಾಗ ಹುಡುಕುತ್ತದೆಯೇ ಅಥವಾ ಸಾರ್ವಜನಿಕರ ಆಕ್ರೋಶಕ್ಕೆ ಮಣಿಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.



