ಆರ್ಕೆಸ್ಟ್ರಾ ನೋಡಿ ವಾಪಸ್ ಬರುತ್ತಿದ್ದ ವೇಳೆ ದುರ್ಘಟನೆ
ಗದಗ: ಜಿಲ್ಲೆಯ ಗದಗ–ಹರ್ತಿ ಮಾರ್ಗದಲ್ಲಿ ಗುರುವಾರ ಬೆಳಿಗ್ಗೆ ಟಾಟಾ ಏಸ್ ವಾಹನವು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತರನ್ನು ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿಂಗಪ್ಪ ಹನುಮಂತ ಯಳವತ್ತಿ (36) ಹಾಗೂ ಮುತ್ತಪ್ಪ ಶಂಕ್ರಪ್ಪ ಸತ್ತಿಗೇರಿ (35) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ತಕ್ಷಣವೇ ಸಮೀಪದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಮಾಹಿತಿಯಂತೆ, ಟಾಟಾ ಏಸ್ ವಾಹನದಲ್ಲಿ ಗೊಜುನೂರು ಗ್ರಾಮಕ್ಕೆ ಆರ್ಕೇಸ್ಟ್ರಾ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದವರು ವಾಪಸ್ಸು ಬರುವಾಗ ಈ ದುರ್ಘಟನೆ ಸಂಭವಿಸಿದೆ. ಚಾಲಕ ನಿದ್ರೆ ಅಮಲಿನಲ್ಲಿದ್ದ ಕಾರಣದಿಂದ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



