ರಾಯಚೂರು: ಸಿಂಧನೂರು ತಾಲೂಕಿನ ಬಸಾಪುರ ಗ್ರಾಮದಲ್ಲಿ ಸ್ವಾಮೀಜಿಯೊಬ್ಬರು ಮಠದೊಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಕ್ತರಲ್ಲಿ ಆತಂಕ ಮತ್ತು ಆಘಾತ ಮೂಡಿಸಿದೆ. ದೇವೇಂದ್ರಪ್ಪ(58), ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದವರು, ವೈರಾಗ್ಯ ಜೀವನವನ್ನು ಅಳವಡಿಸಿಕೊಂಡು ಶಿವಾನಂದ ಜಗದ್ಗುರು ಮಠವನ್ನು ಸ್ಥಾಪಿಸಿದ್ದರು.
ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮದವರಾದ ಅವರು, ಎರಡು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಧಾರ್ಮಿಕ ಜೀವನಕ್ಕೆ ತೊಡಗಿ ಮಠದಲ್ಲಿ ಪುರಾಣ, ಪ್ರವಚನಗಳನ್ನು ನಡೆಸುತ್ತಿದ್ದರು.
ಇತ್ತೀಚಿನ ಅಪಘಾತದ ನಂತರ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಹಿನ್ನೆಲೆ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ತುರುವಿಹಾಳ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



