ದೇವನಹಳ್ಳಿ: ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಮಧ್ಯರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜಯಮ್ಮ (60), ಯಶೋದಮ್ಮ (60), ಗಂಗಾ (38) ಮೃತರು. ಘಟನೆಯಲ್ಲಿ ಟಿಟಿ ವಾಹನ ಚಾಲಕ ಸೇರಿದಂತೆ 8 ಮಂದಿ ಗಾಯಗೊಂಡಿದ್ದು, ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರ ಗಾಯಗೊಂಡ ಕೆಂಪಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆ ಹಿನ್ನೆಲೆ:
ಶಕ್ತಿ ಸಂಘಟನೆಯ ಮೂಲಕ 12 ಜನರ ತಂಡ 15 ದಿನಗಳ ಪ್ರವಾಸಕ್ಕೆ ತಿಪಟೂರಿನಿಂದ ಹೊರಟಿತ್ತು. ಇಂದು ಬೆಳಗ್ಗೆ 6 ಗಂಟೆಯ ಪ್ಲೈಟ್ ನಲ್ಲಿ ಕಾಶಿಗೆ ಟಿಕೆಟ್ ಬುಕ್ ಮಾಡಿತ್ತು. ಹೀಗಾಗಿ ತಿಪಟೂರಿನಿಂದ ಕೆಂಪೇಗೌಡ ಏರ್ಪೋರ್ಟ್ಗೆ ಟಿಟಿ ವಾಹನದ ಮೂಲಕ ರಾತ್ರಿ 10 ಗಂಟೆ ಸುಮಾರಿಗೆ ಹೊರಟಿದ್ದರು. ಏರ್ಪೋರ್ಟ್ನ ಟರ್ಮಿನಲ್ ದಾರಿಯ ಬಗ್ಗೆ ಸರಿಯಾಗಿ ತಿಳಿದಿರದ ಕಾರಣ ಗೂಗಲ್ ಮ್ಯಾಪ್ ಹಾಕಿಕೊಂಡು ಟಿಟಿ ಚಾಲಕ ವಾಹನ ಚಾಲನೆ ಮಾಡುತ್ತಿದ್ದ. ಅಪಘಾತ ನಡೆದ ಸ್ಥಳಕ್ಕೂ ಹಿಂದೆಯೇ ಸರ್ವೀಸ್ ರಸ್ತೆಗೆ ಮೊದಲ ಟರ್ನಿಂಗ್ ಇತ್ತು. ಆದರೆ ಅದು ಗೊತ್ತಾಗದೆ ಮುಂದೆ ಪಾಸ್ ಆಗಿದ್ದ ಟಿಟಿ ವಾಹನ ಮುಂದಿನ ಟರ್ನಿಂಗ್ನಲ್ಲಿ ಯೂಟರ್ನ್ ಪಡೆಯುವ ವೇಳೆ ಲಾರಿ ಟಿಟಿಗೆ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಟಿಟಿಯ ಎಡಭಾಗ ಸಂಪೂರ್ಣ ಜಖಂ ಆಗಿದ್ದು, ಸಿಂಗಲ್ ಸೀಟ್ಗಳಲ್ಲಿ ಕುಳಿತಿದ್ದ ಮೂವರು ಮಹಿಳೆಯರ ದುರ್ಮರಣ ಹೊಂದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.



