HomeArt and Literatureಮೇ ತಿಂಗಳ ಸೊಬಗು `ಗುಲ್ ಮೊಹರ್’

ಮೇ ತಿಂಗಳ ಸೊಬಗು `ಗುಲ್ ಮೊಹರ್’

For Dai;y Updates Join Our whatsapp Group

Spread the love

ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ಆಮ್ಲಜನಕ ಪೂರೈಕೆ ಮಾಡುವ ಮರಗಳು ನಮ್ಮ ಇರುವಿಕೆಯನ್ನು ಅಸ್ತಿತ್ವದಲ್ಲಿರುವ ಹಾಗೆ ನೋಡಿಕೊಳ್ಳುತ್ತವೆ. ನಾನೀಗ ಹೇಳಲು ಹೊರಟಿರುವುದು ಸುಂದರ, ಉಜ್ವಲ ಕೆಂಬಣ್ಣದ ಹೂ ಬಿಡುವ ಗುಲ್ಮೊಹರ್ ಮರದ ಬಗ್ಗೆ. ನನ್ನೂರು ರಾಮಗೇರಿಯಿಂದ ಲಕ್ಷ್ಮೇಶ್ವರದ ಇಟ್ಟಿಗೆರೆ, ಬಟ್ಟೂರ ಹಾಗೂ ಗೊಜನೂರ ಮಾರ್ಗದ ರಸ್ತೆ ಬದಿಯಲ್ಲಿ ಕೆಂಪು ಹೂಗಳ ಸಂಭ್ರಮ ಈಗ ಹೇಳತೀರದು. ಹಸಿರು ಎಲೆಗಳಿಗೆ ಒಂಚೂರೂ ಜಾಗ ನೀಡದೇ ಅರಳುವ ಹೂವು ಕಣ್ಮನ ಸೆಳೆಯುತ್ತದೆ.

ಈ ಆಕರ್ಷಕ ‘ಗುಲ್ ಮೊಹರ್’ ಹೂಗಳು ಬಿರು ಬೇಸಿಗೆಯ ಬಿಸಿಲಲ್ಲಿ ಅರಳುವ ಸುಂದರಿಯರು ಎಂದರೆ ಉತ್ಪ್ರೇಕ್ಷೆಯಲ್ಲ. ಹಾಗೆಯೇ ಈ ವರ್ಷ ಎಪ್ರಿಲ್-ಮೇ ತಿಂಗಳ ಮೂರನೇ ವಾರದಿಂದ ಶಿರಹಟ್ಟಿಯ ಡಬಾಲಿ ಶಾಲೆಯ ಆವರಣದಲ್ಲಿ ಮತ್ತು ತಾಲ್ಲೂಕು ಕ್ರೀಡಾಂಗಣದಲ್ಲಿ ಕೆಂಪು ಹೂಗಳ ಗುಲ್ ಮೊಹರ್ ಮರಗಳು ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಹೀಗೆ ಬಹುತೇಕ ರಸ್ತೆ ಪಕ್ಕದ ಮರಗಳಲ್ಲಿ ಗೋಚರಿಸುವ ವಿಶಿಷ್ಟ, ಅಷ್ಟೇ ವಿಭಿನ್ನ ಬಗೆಯಲ್ಲಿ ಬೆಳೆದು ನಿಲ್ಲುವ ಈ ಗುಲ್ ಮೊಹರ್ ಮರಗಳಲ್ಲಿನ ಕೆಂಪು ಹೂಗಳನ್ನು ಕಂಡ ಕ್ಷಣ ಮನಸ್ಸು ಸೆಳೆವ ಜೊತೆಗೆ ಹಿತಾನುಭವ ನೀಡುತ್ತವೆ.

ಈ ಭಾಗದಲ್ಲಿ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ತನ್ನ ಚೆಲುವ ಸೊಬಗಿನಿಂದ ಈ ಗುಲ್ ಮೊಹರ್ ಹೂವಿನ ಮರಗಳು ಅವರಿಗೆ ವಿಶಿಷ್ಟ ಸ್ವಾಗತ ಕೋರಿ, ಮನಸ್ಸಿಗೆ ಸಂತೋಷ ನೀಡುತ್ತವೆ. ಇವುಗಳಿಗೆ ಉತ್ತರ ಕರ್ನಾಟಕದಲ್ಲಿ ಸಂಕೇಶ್ವರ ಮರ ಎಂದೇ ಹೆಸರು. ಈ ಗಿಡಗಳು ಪ್ರವಾಸಿಗರನ್ನು ಆಕರ್ಷಿಸುವ ವಿಶಿಷ್ಟವಾದ ಗುಣಗಳನ್ನು ಹೊಂದಿವೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಕೆಂಡದಂತಹ ಉರಿ ಬಿಸಿಲು. ಸೆಕೆಯ ಸಂಕಟ, ತಾಪಕ್ಕೆ ದೂರ ಓಡುವಂತೆ ಮಾಡಿದ್ದರೆ, ಅಂಥಾ ಬಿಸಿಲಲ್ಲಿ ಗುಲ್ (ಹೂ) ಮೊಹರ್ (ನವಿಲು) ಜೀವ ಕಳೆ ಪಡೆದಿರುವಂತೆ, ನಸು ನಗುತ್ತಲೇ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವುದು ಈ ಹೂವಿನ ವಿಶೇಷತೆಯಾಗಿಬಿಟ್ಟಿದೆ.

ಡೆಲೋನಿಕ್ಸ್ ರೆಜಿಯಾ ಎಂಬುದು ಗುಲ್ಮೊಹರ್ ಮರದ ವೈಜ್ಞಾನಿಕ ಹೆಸರು. ಇದು ಮಡಗಾಸ್ಕರ್‌ನಲ್ಲಿ ಸ್ಥಳೀಯವಾದ ಸೀಸಲ್ಪಿನಿಯೊಡೆಯೇ ಉಪಕುಟುಂಬದ ಫ್ಯಾಬೇಸಿಯ ಹುರುಳಿ ಕುಟುಂಬದಲ್ಲಿ ಹೂಬಿಡುವ ಸಸ್ಯದ ಒಂದು ಜಾತಿಯಾಗಿದೆ. ಸಸ್ಯಶಾಸ್ತ್ರಜ್ಞ ವೆನ್ಸೆಲ್ ಬೋಜರ್ ಅವರು 19ನೇ ಶತಮಾನದ ಆರಂಭದಲ್ಲಿ ಸಂಶೋಧಿಸಿದರು.

ಇದು ಜರಿ ಗಿಡದಂತಹ ಎಲೆಗಳು ಮತ್ತು ಬೇಸಿಗೆಯಲ್ಲಿ ಕಿತ್ತಳೆ-ಕೆಂಪು ಹೂವುಗಳ ಅಬ್ಬರದ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಪ್ರಪಂಚದ ಅನೇಕ ಉಷ್ಣವಲಯದ ಭಾಗಗಳಲ್ಲಿ ಇದನ್ನು ಅಲಂಕಾರಿಕ ಮರವಾಗಿ ಬೆಳೆಸಲಾಗುತ್ತದೆ ಮತ್ತು ಇಂಗ್ಲೀಷಿನಲ್ಲಿ ಇದನ್ನು ರಾಯಲ್ ಪೊಯಿನ್ಸಿಯಾನಾ, ಫ್ಲಾಂಬಾಯಿಂಟ್, ಫೀನಿಕ್ಸ್ ಹೂವು, ಕಾಡಿನ ಜ್ವಾಲೆ ಅಥವಾ ಜ್ವಾಲೆಯ ಮರ ಎಂದೇ ಹೆಸರುವಾಸಿಯಾಗಿದೆ.

ಹೀಗಾಗಿ ಭಾರತದಲ್ಲಿ ಇದನ್ನು ಮೇ-ಹೂವಿನ ಮರ, ಗುಲ್ಮೊಹರ್ ಅಥವಾ ಗುಲ್ ಮೊಹರ್ ಎಂದು ಕರೆಯಲಾಗುತ್ತದೆ. ಹಾಗೇಯೇ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಇದನ್ನು ಕೃಷ್ಣ ಚುರಾ ಎಂದು ಕರೆಯಲಾಗುತ್ತದೆ. ಶ್ರೀಲಂಕಾದಲ್ಲಿ ಇದನ್ನು ಸಿಂಹಳದಲ್ಲಿ ಮಾರ ಮರ ಎಂದು ಕರೆಯಲಾಗುತ್ತದೆ.

ಭಾರತದ ಕೇರಳದಲ್ಲಿ ರಾಯಲ್ ಪೊಯಿನ್ಸಿಯಾನಾವನ್ನು ಕಾಲ್ವರಿಪ್ಪು (ಕಾಲ್ವರಿಪೂವ್) ಎಂದು ಕರೆಯಲಾಗುತ್ತದೆ. ಕೇರಳದ ಸಂತ ಥಾಮಸ್ ಕ್ರಿಶ್ಚಿಯನ್ನರಲ್ಲಿ ಒಂದು ಜನಪ್ರಿಯ ನಂಬಿಕೆಯಿದೆ. ಅದೇನೆಂದರೆ, ಯೇಸುವನ್ನು ಶಿಲುಬೆಗೇರಿಸಿದಾಗ, ಅವನ ಶಿಲುಬೆಯ ಸಮೀಪದಲ್ಲಿ ಒಂದು ಸಣ್ಣ ರಾಯಲ್ ಪೊಯಿನ್ಸಿಯಾನ ಮರವಿತ್ತು. ಮರದ ಹೂವುಗಳ ಮೇಲೆ ಯೇಸುಕ್ರಿಸ್ತನ ರಕ್ತವು ಚೆಲ್ಲಲ್ಪಟ್ಟಿತು ಮತ್ತು ರಾಯಲ್ ಪೊಯಿನ್ಸಿಯಾನಾ ಹೂವುಗಳು ತೀಕ್ಷ್ಣವಾದ ಕೆಂಪು ಬಣ್ಣವನ್ನು ಪಡೆದವು ಎಂದು ನಂಬಲಾಗಿದೆ. ಇದನ್ನು ಕೇರಳದ ಹಲವು ಪ್ರದೇಶಗಳಲ್ಲಿ ವಾಗಾ ಎಂದೂ ಕರೆಯುತ್ತಾರೆ.

ಗುಲ್ ಮೊಹರ್ ತನ್ನ ಅಲಂಕಾರಿಕ ಮೌಲ್ಯದ ಜೊತೆಗೆ, ಉಷ್ಣವಲಯದ ಪರಿಸ್ಥಿತಿಗಳಲ್ಲಿ ಇದು ಉಪಯುಕ್ತ ನೆರಳಿನ ಮರವಾಗಿದೆ. ಏಕೆಂದರೆ ಇದು ಸಾಮಾನ್ಯವಾಗಿ ಸಾಧಾರಣ ಎತ್ತರಕ್ಕೆ ಬೆಳೆಯುತ್ತದೆ ಆದರೆ ವ್ಯಾಪಕವಾಗಿ ಹರಡುತ್ತದೆ ಮತ್ತು ಅದರ ದಟ್ಟವಾದ ಎಲೆಗಳು ಪೂರ್ಣ ನೆರಳು ನೀಡುತ್ತದೆ. ಗಮನಾರ್ಹವಾದ ಶುಷ್ಕ ಋತುವಿನ ಪ್ರದೇಶಗಳಲ್ಲಿ, ಇದು ಬರಗಾಲದ ಸಮಯದಲ್ಲಿ ತನ್ನ ಎಲೆಗಳನ್ನು ಚೆಲ್ಲುತ್ತದೆ. ಆದರೆ ಇತರ ಪ್ರದೇಶಗಳಲ್ಲಿ ಇದು ವಾಸ್ತವಿಕವಾಗಿ ನಿತ್ಯಹರಿದ್ವರ್ಣವಾಗಿರುತ್ತದೆ.

ಇದಲ್ಲದೆ ಗುಲ್ ಮೊಹರ್ ವಿಷಕಾರಿಯಲ್ಲದ ಮತ್ತು ಹೂವಿನ ಮೊಗ್ಗುಗಳು ಖಾದ್ಯ ಮತ್ತು ಸುವಾಸನೆಗಾಗಿ ಬಳಸಲಾಗುತ್ತದೆ. ಆದರೆ ಗುಲ್ ಮೊಹರ್ ಕಾಡಿನಲ್ಲಿ ಅಳಿವಿನಂಚಿನಲ್ಲಿರುವುದು ವಿಷಾದನೀಯ ಸಂಗತಿ. ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಕಳೆದ ಆರೇಳು ವರ್ಷಗಳ ಹಿಂದೆ ಸಾವಿರಾರು ಗುಲ್ ಮೊಹರ್ ಮರಗಳ ಮಾರಣ ಹೋಮವಾಗಿವೆ. ಮತ್ತೆ ಹೊಸ ಮಾರ್ಗಕ್ಕೆ ಈಗಿನ ಅನೇಕ ಗುಲ್ ಮೊಹರ್ ಮರಗಳು ಬಲಿಯಾಗಿವೆ. ಅಭಿವೃದ್ಧಿ ಹಾಗೂ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಮುಂಬರುವ ದಿನಗಳಲ್ಲಿ ಈ ಸುಂದರ ‘ಗುಲ್ ಮೊಹರ್’ ಹೂ, ಪ್ರಕೃತಿ ಪ್ರಿಯರಿಗೆ ಅಪರೂಪ ಆಗುತ್ತಿವೆ ಎಂಬುದು ಬೇಸರದ ಸಂಗತಿಯಾಗಿದೆ.

– ಬಸವರಾಜ ಎಮ್.ಯರಗುಪ್ಪಿ.

ಲಕ್ಷ್ಮೇಶ್ವರ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!