ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಸೈನಿಕರು ನಮ್ಮ ಹೆಮ್ಮೆ. ಭಾರತದ ಸೈನ್ಯವು ಸಮರ್ಥ ಹಾಗೂ ಬಲಿಷ್ಠವಾಗಿದ್ದು, ಸೈನಿಕ ಸಹೋದರರು ಭಾರತಾಂಬೆಯ ಹೆಮ್ಮೆಯ ವೀರ ಪುತ್ರರು. ಹಗಲಿರುಳೆನ್ನದೇ ದೇಶವನ್ನು ಕಾಯ್ದು-ರಕ್ಷಿಸಿ, ನಮ್ಮೆಲ್ಲರಿಗೆ ರಕ್ಷಣೆ ನೀಡುತ್ತಿರುವ ಸೈನಿಕರ ಪಾತ್ರ ಅನುಪಮವಾದದ್ದು ಎಂದು ಇನ್ನರ್‌ವ್ಹಿಲ್ ಕ್ಲಬ್ ಗದಗ-ಬೆಟಗೇರಿ ಅಧ್ಯಕ್ಷೆ ಅಶ್ವಿನಿ ಜಗತಾಪ ಹೇಳಿದರು.
ಅವರು ಶನಿವಾರ ಗದುಗಿನ ಮಾಜಿ ಸೈನಿಕರ ಸಂಘದ ಸಭಾಂಗಣದಲ್ಲಿ ಗದಗ ಬೆಟಗೇರಿ ಇನ್ನರ್‌ವ್ಹಿಲ್ ಕ್ಲಬ್ ಆಯೋಜಿಸಿದ್ದ `ಮಾಜಿ ಸೈನಿಕರಿಗೆ ಸ್ಪೂರ್ತಿಯ ರಕ್ಷಾ ಬಂಧನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಟುಂಬದಿಂದ ದೂರ ಉಳಿದು, ದೇಶ ರಕ್ಷಣೆಗಾಗಿ ಇಡೀ ಜೀವನವನ್ನೇ ಮೀಸಲಿರಿಸಿದ ಸೈನಿಕರು ದೇಶ ರಕ್ಷಣೆ ಮಾಡುವ ಶೂರ ಹಾಗೂ ಶೌರ್ಯವಂತರು ಎಂಬ ಹೆಮ್ಮೆ ನಮ್ಮೆಲ್ಲರಿಗಿದೆ. ಶತ್ರುಗಳ ಎದೆಯಲ್ಲಿ ನಡುಕು ಹುಟ್ಟಿಸಿ ದೇಶ ರಕ್ಷಣೆಯೊಂದನ್ನೇ ಗುರಿಯಾಗಿಟ್ಟುಕೊಂಡು ಚಳಿ, ಮಳೆ, ಬಿಸಿಲೆನ್ನದೆ ನಿರಂತರ ಕಾಯಕ ನಿರತರಾದ ಕಾಯಕಯೋಗಿಗಳು ಎಂದು ಬಣ್ಣಿಸಿದರು.
ಮಾಜಿ ಸೈನಿಕ, ನ್ಯಾಯವಾದಿ ಸುಧೀರಸಿಂಹ ಘೋರ್ಪಡೆ ಮಾತನಾಡಿ, ಸೇನೆಯಲ್ಲಿ ಸೇವೆ ಸಲ್ಲಿಸುವುದು ಒಂದು ಒಳ್ಳೆಯ ಅವಕಾಶ. ದೇಶ ಪ್ರೇಮ, ದೇಶ ರಕ್ಷಣೆಯ ಅಡಿಯಲ್ಲಿ ಸೈನ್ಯವು ನಿರಂತರ ಸೇವೆ ಸಲ್ಲಿಸುವುದು ಭಾರತಾಂಬೆಯ ನಿಜವಾದ ಸೇವೆಯಾಗಿದೆ. ತಮ್ಮ ನಿವೃತ್ತಿಯ ನಂತರವೂ ದೇಶ ಸೇವೆ ಸಲ್ಲಿಸುವ ಸೈನಿಕರು ಅಜರಾಮರರು ಎಂದರು.
ಇನ್ನರ್‌ವ್ಹಿಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಕ್ಲಬ್‌ನ ಕಾರ್ಯದರ್ಶಿ ಶಿವಲೀಲಾ ಅಕ್ಕಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್‌ನ ಜಂಟಿ ಕಾರ್ಯದರ್ಶಿ ಜಯಶ್ರೀ ಉಗಲಾಟ, ಖಜಾಂಚಿ ಪುಷ್ಪಾ ಬಂಡಾರಿ, ಎಡಿಟರ್ ವೀಣಾ ಕಾವೇರಿ, ಸದಸ್ಯರಾದ ಶಾರದಾ ಸಜ್ಜನರ, ವಿದ್ಯಾ ಗಂಜಿಹಾಳ, ಮಾಜಿ ಸೈನಿಕರಾದ ಸಿ.ಜಿ. ಸೊನ್ನದ, ವ್ಹಿ.ಬಿ. ಬಿಂಗಿ, ಎಂ.ಎಸ್. ಗುಜ್ಜಲ, ಎಸ್.ಎಸ್. ವಡ್ಡಿನ, ಮಾರುತಿ ಕಿರೇಸೂರ, ಬಸವರಾಜ ಇಟಗಿ, ಪಿ.ಎಂ. ಜಂಬಗಿ, ಬಿ.ವ್ಹಿ. ಅಬ್ಬಿಗೇರಿ, ಚನ್ನಯ್ಯ ಬಳಗಾನೂರಮಠ, ಎಸ್.ಎ. ಪಾಟೀಲ, ಎಂ.ಎಸ್. ಹಿರೇಹಾಳ, ಎಸ್.ಕೆ. ಪಾಟೀಲ, ಲಕ್ಷ್ಮಣ ಮುಧೋಳ, ಬಿ.ಎಲ್. ಪಾಟೀಲ, ಸಣ್ಣಸಿದ್ಧಪ್ಪನವರ, ಎಸ್.ಬಿ. ಸರ್ವಿ, ಕೆ.ಎಸ್. ಹಿರೇಮಠ, ಎಸ್.ಎಫ್. ಹೊನ್ನಪ್ಪನವರ, ಈರಣ್ಣ ತಾಳಕೇರಿ, ಬಿ.ಎಂ. ಹುಯಿಲಗೋಳ ಮುಂತಾದವರು ಪಾಲ್ಗೊಂಡಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಮಾಲಗಿತ್ತಿಮಠ, ದೇಶ ಸೇವೆಯೇ ಈಶ ಸೇವೆ ಎಂದು ತಿಳಿದು ಸೈನ್ಯದಲ್ಲಿ ಭಾರತೀಯ ಬಂಧುಗಳ ಹಾರೈಕೆಯಿಂದ ಸೇವೆ ಸಲ್ಲಿಸಿ ವೃತ್ತಿ ಘನತೆಯನ್ನು ಎತ್ತಿ ಹಿಡಿದ ಹೆಮ್ಮೆ ನಮ್ಮ ಸೈನಿಕರ ಬಳಗಕ್ಕೆ ಇದೆ. ನನ್ನ ದೇಶ ನನ್ನ ಜನ ಎಂಬ ಧ್ಯೇಯದೊಂದಿಗೆ ಸೈನ್ಯ ಸದಾ ಸನ್ನದ್ಧವಾಗಿದೆ, ಇನ್ನರ್‌ವ್ಹಿಲ್ ಕ್ಲಬ್‌ನ ಸಹೋದರಿಯರು ರಕ್ಷಾಬಂಧನವನ್ನು ನಮ್ಮೊಂದಿಗೆ ಆಚರಿಸಿ ಸೈನ್ಯ ಹಾಗೂ ಸೈನಿಕರಿಗೆ ಮಾತೃಶಕ್ತಿಯನ್ನು ತುಂಬಿದ್ದಾರೆ ಎಂದರು.



