HomeGadag Newsಹಿರಿಯ ಗುರುಗಳ ಜೀವನವೇ ಒಂದು ಸಂದೇಶ

ಹಿರಿಯ ಗುರುಗಳ ಜೀವನವೇ ಒಂದು ಸಂದೇಶ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ವೈಚಾರಿಕ ಕ್ರಾಂತಿಯ ಜೊತೆಗೆ ಸಾಮಾಜಿಕ ಕ್ರಾಂತಿ ಮಾಡಿದವರು ಗದಗಿನ ಲಿಂಗೈಕ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು. ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರ ಉಳಿಯಲು ವೀರಶೈವ ಲಿಂಗಾಯತ ಮಠಗಳ ಪಾತ್ರ ದೊಡ್ಡದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ ತೋಂಟದಾರ್ಯ ಮಠದ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 76ನೇ ಜಯಂತಿ ಹಾಗೂ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಗದಗಿನ ಇತಿಹಾಸದಲ್ಲಿ ಒಂದು ವಿನೂತನವಾದ ಅಧ್ಯಾಯವನ್ನು ಬರೆದಿಟ್ಟು ನಮ್ಮೆಲ್ಲರಿಗೂ ಸದಾಕಾಲ ಮಾರ್ಗದರ್ಶನ ಮಾಡುತ್ತಿರುವ ಲಿಂ. ತೋಂಟದ ಸಿದ್ದಲಿಂಗ ಮಹಾಸ್ವಾಮಿಯನ್ನು ಭಕ್ತಿ ಭಾವದಿಂದ ಸ್ಮರಣೆ ಮಾಡಬೇಕು ಎಂದರು.

ಗಾಂಧೀಜಿ ನನ್ನ ಜೀವನವೇ ಒಂದು ಸಂದೇಶ ಅಂತ ಹೇಳಿದ್ದರು. ಅದೇ ರೀತಿ ನಮ್ಮ ಹಿರಿಯ ಗುರುಗಳ ಜೀವನವೇ ಒಂದು ಸಂದೇಶ. ಇತ್ತೀಚಿನ ದಿನಗಳಲ್ಲಿ ಆದರ್ಶ, ಆಧ್ಯಾತ್ಮಿಕ ಜೀವನ ನಡೆಸಿದವರು ಗದಗಿನ ಸಿದ್ದಲಿಂಗ ಮಹಾಸ್ವಾಮಿಗಳು. ಅವರ ಸಾಮಿಪ್ಯಕ್ಕೆ ಹೋದರೆ ಅವರ ಚಿಂತನೆ, ವಿಚಾರ, ಪ್ರೀತಿ-ವಿಶ್ವಾಸ ಅನುಭವಕ್ಕೆ ಬರುತ್ತದೆ. ಸರಳವಾಗಿ ಸ್ಥಾನಿಕ ಭಾಷೆಯಲ್ಲಿ ಎಲ್ಲ ವಿಚಾರ ಹೇಳುತ್ತಿದ್ದರು. ಅವರ ಜನಪರ ಚಿಂತನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಭಾಗದಲ್ಲಿ ವೈಚಾರಿಕ ಕ್ರಾಂತಿಯ ಜೊತೆಗೆ ಸಾಮಾಜಿಕ ಕ್ರಾಂತಿ ಮಾಡಿದವರು ಗದಗಿನ ಸ್ವಾಮೀಜಿಗಳು. ಸಮಾಜದಲ್ಲಿ ಅನಿಷ್ಠ ಪದ್ಧತಿಗಳ ವಿರುದ್ಧ ಸಿದ್ದಲಿಂಗ ಸ್ವಾಮೀಜಿ ಹೋರಾಟ ಮಾಡಿದ್ದರಿಂದ ಈ ಭಾಗದಲ್ಲಿ ಸಂಸ್ಕೃತಿ-ಸಂಸ್ಕಾರ ಉಳಿದಿದೆ ಎಂದರು.

ಸಮಾಜದಲ್ಲಿ ಎರಡು ರೀತಿಯ ಸ್ವಾಮೀಜಿಗಳು ಇರುತ್ತಾರೆ. ಬದುಕಿನಿಂದ ದೂರವಾಗಿ ಹಿಮಾಲಯದಲ್ಲಿ ತಪಸ್ಸು ಮಾಡಿ ಜ್ಞಾನೋದಯ ಆಗಿದೆ ಎಂದು ಹೇಳುವ ಸ್ವಾಮಿಗಳು ಒಂದು ವರ್ಗವಾದರೆ, ಇದೇ ಸಮಾಜ-ಸಂಸಾರದಲ್ಲಿ ಇದ್ದು, ಬದುಕಿನ ಎಲ್ಲ ಸವಾಲುಗಳನ್ನು ಎದುರಿಸಿ ಆದರ್ಶ ಬದುಕು ನಡೆಸಿ ಮಾರ್ಗದರ್ಶನ ಮಾಡಿ, ಇಡೀ ಜಗತ್ತಿಗೆ ಬೆಳಕು ಕೊಡುವ ಬಸವ ತತ್ವ ಪಸರಿಸುವ ಸ್ವಾಮೀಜಿಗಳು ಇದ್ದಾರೆ ಎಂದರು.

ಪರಮಪೂಜ್ಯರು ಭಾವೈಕ್ಯತೆಯಲ್ಲಿ ಮುಂದು. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ. ಹುಟ್ಟಿನ ಮೂಲ ಮುಖ್ಯವಲ್ಲ. ಯಾರಿಗಾಗಿ ಹುಟ್ಟಿದ್ದೇವೆ ಎನ್ನುವುದು ಮುಖ್ಯವಲ್ಲ. ಯಾರಿಗಾಗಿ ಬದುಕುತ್ತಿದ್ದೇವೆ ಎನ್ನುವುದು ಮುಖ್ಯ, ಎಲ್ಲರಿಗಾಗಿ ಬದುಕುವುದು ಮುಖ್ಯ ಎಂದು ಪೂಜ್ಯರು ಹೇಳುತ್ತಿದ್ದರು. ಅವರ ಬಳಿ ಹೋದಾಗ ಹೊಸ ವಿಚಾರ ಕಲಿಯಲು ಅವಕಾಶ ಇತ್ತು. ಕಾಯಕದ ಬಗ್ಗೆ ಅವರ ಮಾತು, ಕೃಷಿ ಬೆಳೆದಿದೆ. ರಾಜಕಾರಣಿಗಳು ಮಾಡಬೇಕಾದ ಚಿಂತನೆಯನ್ನು ಸ್ವಾಮೀಜಿ ಮಾಡುತ್ತಿದ್ದರು. ರೈತನ ಬದುಕು ಹಸನು ಮಾಡಬೇಕು ಎನ್ನುವುದು ಪೂಜ್ಯರ ಬಯಕೆ ಆಗಿತ್ತು. ಸಮಾಜದ ಕಟ್ಟ ಕಡೆಯ ಜನರಿಗೆ ಸ್ವಾಭಿಮಾನದ ಬದುಕು ಕೊಟ್ಟವರು ಸ್ವಾಮೀಜಿ. ಅವರ ಪುಣ್ಯಾರಾಧನೆ ನಿರಂತರ ನಡೆಯಲಿ ಎಂದರು.

ಇತ್ತೀಚಿನ ದಿನಗಳಲ್ಲಿ ನಾಗರಿಕತೆ ಮತ್ತು ಸಂಸ್ಕೃತಿ ನಡುವಿನ ವ್ಯತ್ಯಾಸ ಗೊತ್ತಿಲ್ಲ. ನಮ್ಮ ಹತ್ತಿರ ಏನಿದೆಯೋ ಅದು ನಾಗರಿಕತೆ, ನಾವೇನಾಗಿದ್ದೇವೆಯೋ ಅದು ಸಂಸ್ಕೃತಿ. ಈಗಿನ ಪರಪೂಜ್ಯರು ನಾಗನೂರು ಭಾಗದಲ್ಲಿ ಬಸವ ತತ್ವ ಪ್ರಚಾರ ಮಾಡಿ ಕ್ರಾಂತಿ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ತೋಂಟದಾರ್ಯ ಮಠದ ಪರಂಪರೆ ಮುಂದುವರೆಯುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೋಂಟದಾರ್ಯ ಮಠದ ಪೀಠಾಧ್ಯಕ್ಷರಾದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ನಿಜಗುಣಪ್ರಭು ತೋಂಟದಾರ್ಯಮಠ, ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಶೀ ಪೂರ್ಣೇಶ್ವರ ಮಹಾಸ್ವಾಮಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ್, ಮಾಜಿ ಸಂಸದ ಐ.ಜಿ. ಸನದಿ, ಪದ್ಮಶ್ರೀ ಭೀಮವ್ವ ಶಿಳ್ಳೇಕ್ಯಾತರ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಬಸವ ತತ್ವ ಆಧಾರದಲ್ಲಿ ಶ್ರೀಮಠ ನೂರಾರು ವರ್ಷಗಳಿಂದ ನಡೆಯುತ್ತ ಬಂದಿದೆ. ಕಾಯಕ ಮತ್ತು ದಾಸೋಹದ ಮೂಲಕ ರಾಜ್ಯದಲ್ಲಿ ಮಠ-ಮಾನ್ಯಗಳು ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಸಂಸ್ಕೃತಿ, ಸಂಸ್ಕಾರ ಇದ್ದರೆ ಅದಕ್ಕೆ ವೀರಶೈವ ಲಿಂಗಾಯತ ಮಠಗಳ ಪಾತ್ರ ಬಹಳ ದೊಡ್ಡದು. ನಮ್ಮ ಸರ್ಕಾರಗಳು ಮಾಡದ ಕೆಲಸವನ್ನು ಮಠಗಳು ಮಾಡುತ್ತಿವೆ. ಬ್ರಿಟೀಷರ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಮಠಗಳು ಮಾಡಿವೆ. ಸಮಾನತೆ ಕೇವಲ ಮಾತಿನಲ್ಲಿ ಅಲ್ಲ, ಆಚರಣೆಯಲ್ಲಿ ತಂದಿರುವುದು ಮಠಗಳು. ಅಂತಹ ಶ್ರೇಷ್ಠ ಮಠಗಳ ಸಾಲಿನಲ್ಲಿ ಗದಗ ತೋಂಟದಾರ್ಯ ಮಠ ಇದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!