HomeGadag Newsಸಾರ್ವಜನಿಕರ ಬೇಡಿಕೆ ಈಡೇರಿದಂತಾಗಿದೆ

ಸಾರ್ವಜನಿಕರ ಬೇಡಿಕೆ ಈಡೇರಿದಂತಾಗಿದೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯ ಬಜಾರ್ ರಸ್ತೆಯಿಂದ ದೂದಪೀರಾಂ ದರ್ಗಾವರೆಗಿನ ಮುಖ್ಯ ರಸ್ತೆ ಅಭಿವೃದ್ಧಿಯಾಗಬೇಕು ಎಂಬುದು ಪಟ್ಟಣದ ಜನರ ಹಲವಾರು ವರ್ಷಗಳ ಬೇಡಿಕೆಯಾಗಿದೆ. ಇದೀಗ 2 ಕೋಟಿ ರೂ ವೆಚ್ಚದಲ್ಲಿ ಭರಮದೇವರ ಸರ್ಕಲ್‌ನಿಂದ ದರ್ಗಾವರೆಗೆ ಸಿಸಿ ರಸ್ತೆ ನಿರ್ಮಾಣವಾಗುತ್ತಿದ್ದು, ಜನರ ಬೇಡಿಕೆ ಈಡೇರಿದಂತಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯ 2ಕೋಟಿ ರೂ ಅನುದಾನದಲ್ಲಿ ಪಟ್ಟಣದ ದೂದನಾನಾ ದರ್ಗಾ ರಸ್ತೆ (ಕಾಂಕ್ರೀಟ್ ರಸ್ತೆ) ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಅಟೋ ಚಾಲಕರು ಸೇರಿ ಕೆಲ ಸಾರ್ವಜನಿಕರು ಮಾತನಾಡಿ, ನಗರೋತ್ಥಾನ ಯೋಜನೆಯಡಿ ದರ್ಗಾ ಹತ್ತಿರವೇ ರಸ್ತೆ ಅಭಿವೃದ್ಧಿಗೆ ರಸ್ತೆ ಅಗೆದು ವರ್ಷಗಳಿಂದ ಅರ್ಧಕ್ಕೇ ನಿಲ್ಲಿಸಿದ್ದಾರೆ. ಇನ್ನು ಮುಖ್ಯ ಬಜಾರ್ ರಸ್ತೆಯಿಂದ ದರ್ಗಾ ಸಂಪರ್ಕಿಸುವ 600 ಮೀಟರ್ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ತಿಂಗಳುಗಳೇ ಕಳೆದಿವೆ. ಇದರಿಂದಾಗಿ ನಿತ್ಯ ಅಟೋ ಚಾಲಕರು, ರೈತರು, ವ್ಯಾಪಾರಸ್ಥರು, ಭಕ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಅರ್ಧಕ್ಕೆ ನಿಲ್ಲಿಸಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದುವರೆದ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಶಾಸಕರ ಬೆಂಬಲಿಗರು ಮತ್ತು ಅಟೋ ಚಾಲಕರ ನಡುವೆ ವಾಗ್ವಾದ ನಡೆದಾಗ, ಪಿಎಸ್‌ಐ ನಾಗರಾಜ ಗಡಾದ ನೇತೃತ್ವದಲ್ಲಿ ಪೊಲೀಸರು ಪರಿಸ್ಥಿತಿ ನಿಭಾಯಿಸಿದರು.

ಮುಂದುವರೆದು ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡುವುದು ಕಷ್ಟವಿದೆ. ಈ ಸಂದರ್ಭದಲ್ಲಿ ಕೆಲವರು ವೈಯಕ್ತಿಕ ಹಿತಾಸಕ್ತಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಇಂತವರ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ಪೊಲೀಸರಿಗೆ ದೂರು ನೀಡಿ ಕಡಿವಾಣ ಹಾಕಬೇಕು. ಹಾವಳಿ ಆಂಜನೇಯ ದೇವಸ್ಥಾನದ ಹತ್ತಿರ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಹಾಕಿರುವ ಮಣ್ಣು ಸರಿ ಇಲ್ಲ ಎಂದು ಸುಳ್ಳು ಆರೋಪ ಮಾಡಿ ಕೆಲಸ ಬಂದ್ ಮಾಡಿಸಿದ್ದಾರೆ. ಈ ಮಣ್ಣನ್ನು ತಜ್ಞರಿಂದ ಪರೀಕ್ಷೆ ಮಾಡಿಸಲಾಗಿ ಅದು ಯೋಗ್ಯವಾದ ಮಣ್ಣು ಎಂದು ವರದಿ ಬಂದಿದೆ. ತಮ್ಮ ಸ್ವ ಹಿತಾಸಕ್ತಿಗಾಗಿ ಆರೋಪ/ಅಡ್ಡಿಪಡಿಸಿದರೆ ದರ್ಗಾ ಕಮಿಟಿ ಹಾಗೂ ಪುರಸಭೆ ಸದಸ್ಯರು ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ದೂರು ನೀಡುವ ದಿಟ್ಟ ನಿರ್ಣಯ ತೆಗೆದುಕೊಳ್ಳಬೇಕು ಎಂದರು.

ಪುರಸಭೆ ಉಪಾಧ್ಯಕ್ಷ ಫಿರ್ದೋಸ್ ಆಡೂರ, ಸ್ಥಾಯಿ ಕಮಿಟಿ ಚೇರಮನ್ ವಿಜಯ ಕರಡಿ, ಸದಸ್ಯರಾದ ಜಯಮ್ಮ ಅಂದಲಗಿ ಮಹಾದೇವಪ್ಪ ಅಣ್ಣಿಗೇರಿ, ಎಸ್.ಕೆ. ಹವಾಲ್ದಾರ, ಸಿಕಂದರ ಕಣಕೆ, ರಮೇಶ ಗಡದವರ, ಅಶ್ವಿನಿ ಅಂಕಲಕೋಟಿ, ವಾಣಿ ಹತ್ತಿ, ಪೂರ್ಣಿಮಾ ಪಾಟೀಲ, ಮಂಜುಳಾ ಗುಂಜಳ, ನೀಲಪ್ಪ ಹತ್ತಿ, ಎಂ.ಆರ್. ಪಾಟೀಲ, ದೂದನಾನಾ ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನಸಾಬ ಕಣಕೆ, ಅಂಜುಮನ್ ಕಮಿಟಿ ಅಧ್ಯಕ್ಷ ಮುಕ್ತಾರಅಹ್ಮದ ಗದಗ, ದಾದಾಪೀರ ಮುಚ್ಚಾಲೆ, ಜಾಕೀರಹುಸೇನ ಹವಾಲ್ದಾರ, ಬಸವರಾಜ ಚಕ್ರಸಾಲಿ, ಮಂಜುನಾಥ ಹೊಗೆಸೊಪ್ಪಿನ, ವಾಸು ಬೋಮಲೆ, ಪ್ರಕಾಶ ಮಾದನೂರ, ಕಲಂದರ ಸೂರಣಗಿ, ಪ್ರಕಾಶ ಗುತ್ತಲ, ಅಲ್ಪ ಸಂಖ್ಯಾತರ ಇಲಾಖೆ ಅಧಿಕಾರಿ ಅಮಿತ ಬಿದರಿ, ಪುರಸಭೆ ಮುಖ್ಯಾದಿಕಾರಿ ಮಹಾಂತೇಶ ಬೀಳಗಿ, ಹಿರಿಯ ಅರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ದೂದನಾನಾ ದರ್ಗಾ ಕಮಿಟಿ ಸದಸ್ಯರು, ಸಾರ್ವಜನಿಕರು ಇದ್ದರು.

ಗುತ್ತಿಗೆದಾರರು ಉತ್ತಮ ಗುಣಮಟ್ಟ ರಸ್ತೆ ನಿರ್ಮಿಸಬೇಕು. ಸಾರ್ವಜನಿಕರು ಮತ್ತು ದರ್ಗಾ ಕಮಿಟಿಯವರು ಗುಣಮಟ್ಟದ ಕಾಮಗಾರಿಯಾಗುವಂತೆ ನಿಗಾ ವಹಿಸಬೇಕು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ.

– ಡಾ. ಚಂದ್ರು ಲಮಾಣಿ.

ಶಾಸಕರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!