ಬೆಂಗಳೂರು:- ಕಳೆದ ಮೂರು ವಾರಗಳಿಂದ ಬೆಂಗಳೂರಿನ ಉದ್ಯಾನವನಗಳಲ್ಲಿ ‘ಬೆಂಗಳೂರು ನಡಿಗೆ’ ಕಾರ್ಯಕ್ರಮ ನಡೆಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗ ನಗರದಲ್ಲಿನ ಪಾರ್ಕ್ಗಳ ಪುನಶ್ಚೇತನದ ಜೊತೆಗೆ ಹೊಸ ಯೋಜನೆ ರೂಪಿಸಿದ್ದಾರೆ.
ರಾಜಧಾನಿಯ ಏಳು ಕಡೆಗಳಲ್ಲಿ ‘ಟ್ರೀ ಪಾರ್ಕ್’ಗಳನ್ನು ನಿರ್ಮಾಣ ಮಾಡುವ ಮೂಲಕ ದೇಶಿ ಮರಗಳ ಸಂರಕ್ಷಣೆಯ ಜೊತೆಗೆ ವಾಯುಮಾಲಿನ್ಯ ನಿಯಂತ್ರಣದತ್ತ ಹೆಜ್ಜೆ ಇಡಲು ಅವರು ಸಜ್ಜಾಗಿದ್ದಾರೆ.
ಟ್ರೀ ಪಾರ್ಕ್ ಯೋಜನೆಯ ಉದ್ದೇಶ ದೇಶಿ ಮರಗಳ ಪರಿಚಯ, ವಾಕಿಂಗ್ ಪಾತ್ಗಳ ಸೌಲಭ್ಯ ಹಾಗೂ ನಾಗರಿಕರಿಗೆ ವಾಯುವಿಹಾರದ ಸ್ಥಳ ಒದಗಿಸುವುದು. ಅರಣ್ಯ ಇಲಾಖೆಯ ಜತೆ ಚರ್ಚಿಸಿ, ನಿರ್ಮಾಣಕ್ಕೆ ಸೂಕ್ತ ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಯಲಿದೆ.
ಪರಿಸರ ತಜ್ಞರ ಪ್ರಕಾರ, ಟ್ರೀ ಪಾರ್ಕ್ ನಿರ್ಮಾಣದಿಂದ ವಾಯು ಗುಣಮಟ್ಟ ಸುಧಾರಣೆ, ಅಂತರ್ಜಲ ಮಟ್ಟ ಏರಿಕೆ, ಹಾಗೂ ಪರಿಸರ ಸಮತೋಲನಕ್ಕೆ ಸಹಕಾರ ದೊರೆಯಲಿದೆ. ಜೊತೆಗೆ, ವಿದ್ಯಾರ್ಥಿಗಳು ಮರಗಳ ಅಧ್ಯಯನ ಮಾಡಲು ಸಹ ಅನುಕೂಲವಾಗಲಿದೆ.
ನಗರದ ವೇಗದ ಅಭಿವೃದ್ಧಿಯಿಂದ ಮರಗಳು ನಾಶವಾಗುತ್ತಿರುವ ಈ ಸಮಯದಲ್ಲಿ, ಸರ್ಕಾರ ಕೈಗೊಂಡಿರುವ ಈ ಟ್ರೀ ಪಾರ್ಕ್ ಯೋಜನೆ ಪರಿಸರ ಪ್ರಿಯರಲ್ಲಿ ಹೊಸ ಆಶೆಯನ್ನು ಮೂಡಿಸಿದೆ. ಈಗ ಸರ್ಕಾರ ಯಾವಾಗ ಈ ಯೋಜನೆಗೆ ಅಧಿಕೃತ ಮುಹೂರ್ತ ನಿಗದಿ ಮಾಡುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.



