HomeGadag Newsಶರಣರ ನುಡಿಗಳು ಬದುಕಿಗೆ ದಾರಿ

ಶರಣರ ನುಡಿಗಳು ಬದುಕಿಗೆ ದಾರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶರಣರ ಒಂದೊಂದು ವಚನದಲ್ಲಿಯೂ ಅನುಭಾವವೇ ತುಂಬಿದೆ. ಶರಣರ ಅನುಭಾವದ ನುಡಿಗಳು ಬದುಕಿಗೆ ದಾರಿ ತೋರುವ ಕೆಲಸ ಮಾಡುತ್ತವೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2757ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಬದುಕಿಗೆ ಸುಖ, ಶಾಂತಿ, ನೆಮ್ಮದಿ ದೊರೆಯಬೇಕಾದರೆ ಶರಣರ ವಚನಗಳ ಅಧ್ಯಯನ ಅವಶ್ಯ. ಅದುವೇ ಆಧ್ಯಾತ್ಮಿಕ ವಿದ್ಯೆ. ಅವುಗಳಿಂದಲೇ ಸುಖ, ಸಂತೋಷ. ಮಾನವನ ದುರ್ಗುಣಗಳನ್ನು ಕಳೆಯುವ ಶಕ್ತಿ ವಚನಗಳಿಗಿವೆ. ಬದುಕು ಬಿದ್ದು ಹೋಗದಂತೆ ಶರಣರ ವಚನಗಳು ಮಾಡುತ್ತವೆ. ಆದ್ದರಿಂದ ನಿತ್ಯ ಹತ್ತಾರು ವಚನಗಳನ್ನು ಓದುವುದರಿಂದ ಬದುಕು ಸಾರ್ಥಕವಾಗುತ್ತದೆ. ಲೌಕಿಕವಾದ ವಸ್ತುಗಳಿಂದ ಜೀವನ ಹಾಳು ಮಾಡಿಕೊಳ್ಳದೆ ವಚನಗಳ ಓದಿನಿಂದ ಜೀವನವನ್ನು ಹಗುರ ಮಾಡಿಕೊಳ್ಳಬಹುದು. ಶರಣರ ವಚನಗಳಲ್ಲಿ ಅಂಥ ಅದ್ಭುತ ಶಕ್ತಿ ಇದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶೈಲಾ ಕೋಟೆಕಲ್ಲ ಉಪಸ್ಥಿತರಿದ್ದರು. ವಚನ ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ರೇವಣಸಿದ್ದಯ್ಯ ಮಂಟೂರಮಠ ನಡೆಸಿದರು. ಧರ್ಮಗ್ರಂಥ ಪಠಣವನ್ನು ಪುರುಷೋತ್ತಮ ಹೂಗಾರ ಮತ್ತು ವಚನ ಚಿಂತನವನ್ನು ವೀರೇಶ ಮದ್ಲಿ ಮಂಡಿಸಿದರು. ದಾಸೋಹ ಸೇವೆಯನ್ನು ಚೆನ್ನಮ್ಮ ಚಳ್ಳಮರದ ಇವರ ಸ್ಮರಣಾರ್ಥ ಅವರ ಮಗ, ಸೊಸೆ, ಮೊಮ್ಮಕ್ಕಳು, ಕುಟುಂಬ ವರ್ಗದವರು ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ, ಸಹ ಚೇರಮನ್ ಶಿವಾನಂದ ಹೊಂಬಳ ಮತ್ತು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಡಾ. ಉಮೇಶ ಪುರದ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಗದಗ ಗ್ರಾಮೀಣ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಎಸ್.ಎಂ. ಮರಿಗೌಡ್ರ ‘ಕಡಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಳ್ಬುದೆ?’ ಎಂಬ ವಿಷಯ ಕುರಿತು ಮಾತನಾಡುತ್ತಾ, ಬಂಡಿ ಸುರಕ್ಷಿತವಾಗಿ ಸಾಗಬೇಕಾದರೆ ಕಡಗೀಲು ಅವಶ್ಯ. ಕಡಗೀಲು ಇಲ್ಲದಿದ್ದರೆ ಬಂಡಿ ಕಳಚಿ ಬೀಳುತ್ತದೆ. ಹಾಗೆ ಮಾನವನ ದೇಹವೆಂಬ ಬಂಡಿಗೆ ಶಿವಶರಣರ ನುಡಿಗಳು ಎಂಬ ಕಡಗೀಲು ಅವಶ್ಯ. ಬಂಡಿ, ಬಂಡಿಯ ಚಕ್ರ, ಬಂಡಿಯಲ್ಲಿ ಪ್ರಯಾಣ ಮಾಡುವವನ ಗುರಿ, ಎಲ್ಲವನ್ನು ಕಡಗೀಲು ನಿರ್ಧರಿಸುತ್ತದೆ. ಹಾಗೆ ಮಾನವನ ದೇಹ, ಗರ್ವದಿಂದ ನಡೆಯುವ ಗತಿ, ಅವನ ಗುರಿ, ಎಲ್ಲವನ್ನು ನಿರ್ಧರಿಸುವುದು ಅವನ ಮನಸ್ಸು. ಅದಕ್ಕೆ ಶಿವಶರಣರ ವಚನಗಳ ನುಡಿಗಟ್ಟುಗಳು ಕಡಗೀಲು ಇದ್ದಂತೆ ಎಂದು ದೃಷ್ಟಾಂತದೊಂದಿಗೆ ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!