ಬೆಂಗಳೂರು:- ನಗರದಲ್ಲಿ ಐಷಾರಾಮಿ ಜೀವನ ನಡೆಸುವ ಆಸೆಯಿಂದ ಕಳ್ಳತನವನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡಿದ್ದ ಇಬ್ಬರು ಕುಖ್ಯಾತ ಕಳ್ಳರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗಗನ್ ಮತ್ತು ನೀತಿನ್ ಬಂಧಿತರು. ಇವರಿಬ್ಬರು ಹಲಸೂರು ಗೇಟ್, ಹೈಗ್ರೌಂಡ್, ಉಪ್ಪಾರಪೇಟೆ, ಬಸವನಗುಡಿ, ಬಾಗಲಗುಂಟೆ, ರಾಜಾಜಿನಗರ, ಮಲ್ಲೇಶ್ವರಂ, ಹೊಸಪೇಟೆ, ಹುಬ್ಬಳ್ಳಿ ಮತ್ತು ತಿಪಟೂರು ಸೇರಿದಂತೆ ಅನೇಕ ಕಡೆಗಳಲ್ಲಿ ಅಂಗಡಿಗಳ ಶೆಟರ್ ಮುರಿದು ಕಳ್ಳತನ ಎಸಗಿದ್ದಾರೆ ಎಂದು ತನಿಖೆಯಿಂದ ಬಹಿರಂಗವಾಗಿದೆ.
ರಾತ್ರಿ ವೇಳೆ ಮುಖಕ್ಕೆ ಮಾಸ್ಕ್ ಧರಿಸಿ, ಕಬ್ಬಿಣದ ರಾಡ್ ಬಳಸಿ ಅಂಗಡಿಗಳೊಳಗೆ ನುಗ್ಗಿ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದರು. ಈಗಾಗಲೇ ಅನೇಕ ಬಾರಿ ಜೈಲು ಪ್ರವೇಶಿಸಿದರೂ, ಕಳ್ಳತನದ ಹಾದಿ ಬಿಡದೆ ಮತ್ತೆ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ ಈ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿದ್ಯಾರಣ್ಯಪುರ ಪೊಲೀಸರು ಈ ಬಂಧನದ ಮೂಲಕ ನಗರದಲ್ಲಿನ ಸರಣಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಿದ್ದಾರೆ.



