ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅತ್ಯಂತ ಮಹತ್ವದ ದಿನವಾಗಿದೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದು ಪ್ರಕರಣದ ವಿಚಾರಣೆ ನಡೆಯಲಿದ್ದು, ಸ್ವಾಮೀಜಿಯ ಭವಿಷ್ಯದ ಬಗ್ಗೆ ಮಹತ್ವದ ಆದೇಶ ಹೊರಬೀಳುವ ಸಾಧ್ಯತೆಯಿದೆ.
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಈ ಪ್ರಕರಣದಲ್ಲಿ, ನ್ಯಾಯಾಲಯವು ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬ ಬಗ್ಗೆ ಭಕ್ತರು ಮತ್ತು ಸಾರ್ವಜನಿಕರ ಚಿತ್ತ ಕೋರ್ಟ್‌ನತ್ತ ನೆಟ್ಟಿದೆ. ಹೌದು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾದ ಮೊದಲ ಪೋಕ್ಸೋ ಪ್ರಕರಣದಲ್ಲಿ ವಾದ–ಪ್ರತಿವಾದಗಳು ಮುಕ್ತಾಯಗೊಂಡಿದ್ದು,
ಇಂದು ತೀರ್ಪು ಹೊರ ಬೀಳಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಮೊದಲ ಎಫ್ಐಆರ್ ಕುರಿತು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪನ್ನು ಪ್ರಕಟಿಸಲು ಸಿದ್ಧವಾಗಿದೆ.
ಶರಣರು ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ಆಶ್ರಯ ಪಡೆದಿದ್ದು, ತೀರ್ಪು ಹಿನ್ನೆಲೆಯಲ್ಲಿ ಇಂದು ದಾವಣಗೆರೆಯಿಂದ ಚಿತ್ರದುರ್ಗದತ್ತ ತೆರಳಿದ್ದಾರೆ. ಇವರೊಂದಿಗೆ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿಯೂ ಇದ್ದರು. ಶಿವಮೂರ್ತಿ ಶರಣರ ವಿರುದ್ಧ ದಾಖಲಾದ ಎರಡು ಪೋಕ್ಸೋ ಪ್ರಕರಣಗಳಲ್ಲಿ ಮೊದಲ ಪ್ರಕರಣದ ವಿಚಾರಣೆ ಸುದೀರ್ಘವಾಗಿ ನಡೆದಿದೆ.
ಸಂತ್ರಸ್ತೆಯ ಪರ ಅಂತಿಮ ವಾದ ಮಂಡನೆಯೂ ಪೂರ್ಣಗೊಂಡಿದೆ. ವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಗಂಗಾಧರಪ್ಪ ಚನ್ನಬಸಪ್ಪ ಹಡಪದ್ ನವೆಂಬರ್ 26 ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದ್ದರು. ಇಂದು ತೀರ್ಪಿನ ಹಿನ್ನೆಲೆಯಲ್ಲಿ ಚಿತ್ರದುರ್ಗ ನ್ಯಾಯಾಲಯದ ಬಳಿ ಈಗಾಗಲೇ ಮಠದ ಭಕ್ತರು ಜಮಾಯಿಸಿದ್ದು, ಅಂತಿಮ ತೀರ್ಪಿಗಾಗಿ ಕಾದು ಕುಳಿತಿದ್ದಾರೆ.



