HomeGadag Newsತೋಂಟದಾರ್ಯ ಜಾತ್ರೆ ಪ್ರಜ್ಞಾವಂತ ಮೌಲ್ಯಗಳ ಸಂಕೇತ

ತೋಂಟದಾರ್ಯ ಜಾತ್ರೆ ಪ್ರಜ್ಞಾವಂತ ಮೌಲ್ಯಗಳ ಸಂಕೇತ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಾತ್ರೆಗಳು ದೇವರು-ಧರ್ಮದ ಹೆಸರಿನಲ್ಲಿ ಮೌಢ್ಯಗಳಿಗೆ, ಅರ್ಥಹೀನ ಆಚರಣೆಗಳಿಗೆ ಬಲಿಯಾಗುವ ಅನೇಕ ನಿದರ್ಶನಗಳು ನಮ್ಮ ನಾಡಿನಲ್ಲಿವೆ. ಆದರೆ ಅವೆಲ್ಲಕ್ಕಿಂತ ಭಿನ್ನವಾಗಿ ನಡೆಯುವ ತೋಂಟದಾರ್ಯ ಮಠದ ಜಾತ್ರೆಯು ಅರಿವು-ಆಚಾರ-ವಿಚಾರಗಳಂಥ ಪ್ರಜ್ಞಾವಂತ ಮೌಲ್ಯಗಳ ಸಂಕೇತವಾಗಿದೆ ಎಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ನುಡಿದರು.

ಅವರು ಶನಿವಾರ ನಗರದ ತೋಂಟದಾರ್ಯ ಮಠದ 2025ನೇ ಸಾಲಿನ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

500 ವರ್ಷಗಳ ಭವ್ಯ ಪರಂಪರೆ ಇರುವ ತೋಂಟದಾರ್ಯ ಮಠದ ಜಾತ್ರೆಯನ್ನು ಉದ್ಘಾಟಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. 12ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಬಸವಾದಿ ಶರಣರ ಹಾದಿಯಲ್ಲಿ ಶ್ರೀ ತೋಂಟದಾರ್ಯ ಮಠ ಸಾಗಿಬಂದಿದ್ದು, ಮನುಕುಲವನ್ನು ವಿಭಜಿಸುವ ಶಕ್ತಿಗಳನ್ನು ಮೀರಿ ಸಮಾನತೆಯನ್ನು ಸಾಧಿಸುವ ಅನಿವಾರ್ಯತೆ ಇದೆ ಎಂದರು.

ಮನುಜಕುಲದ ನಾಗರಿಕತೆ ಬೆಳೆದುಬಂದ ಇತಿಹಾಸವನ್ನು ಅವಲೋಕಿಸಿದರೆ ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುವುದಕ್ಕಾಗಿ ದೇವರು-ಧರ್ಮಗಳು ಹುಟ್ಟಿಕೊಂಡಿವೆ. ಆದರೆ ಅದೇ ದೇವರು-ಧರ್ಮದ ಹೆಸರಿನಲ್ಲಿ ಅಸಮಾನತೆ-ಅನಾಚಾರಗಳು ನಡೆಯುತ್ತಿರುವುದು ವಿಪರ್ಯಾಸವಾಗಿದೆ. ಬಸವತತ್ವವು ಸಮ ಸಮಾಜದ ನಿರ್ಮಾಣಕ್ಕೆ ಅಡಿಗಲ್ಲಾಗಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಚನ ಸಾಹಿತ್ಯದ ಉನ್ನತೀಕರಣ ಹಾಗೂ ಅಧ್ಯಯನಕ್ಕಾಗಿ ವಚನ ವಿಶ್ವವಿದ್ಯಾಲಯ ನಿರ್ಮಿಸಲಾಗುವುದು ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಖ್ಯಾತ ವಿಜ್ಞಾನ ಸಾಹಿತಿಗಳಾದ ಡಾ. ನಾ. ಸೋಮೇಶ್ವರ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಕನ್ನಡ ಭಾಷೆಯಲ್ಲಿ ರಚನೆಯಾದ ವಚನಗಳು ಶ್ರೀಸಾಮಾನ್ಯನಿಗೂ ಅಭಿವ್ಯಕ್ತಿಯ ಸ್ವಾತಂತ್ರ್ಯ ನೀಡಿದವು. ಪಂಡಿತರ ಭಾಷೆಯಾದ ಸಂಸ್ಕೃತವನ್ನು ಮೀರಿ ಕನ್ನಡ ಭಾಷೆಯಲ್ಲೇ ಸಾಮಾನ್ಯರು ತಮ್ಮ ಉದಾತ್ತ ವಿಚಾರಗಳನ್ನು ಪ್ರಸ್ತುತಪಡಿಸಿದರು.

ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ಸ್ವಾಗತಿಸಿದರು. ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಅತಿಥಿಗಳನ್ನು ಪರಿಚಯಿಸಿದರು.

ಸಾನ್ನಿಧ್ಯ ವಹಿಸಿದ್ದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಗುಳೇದಗುಡ್ಡದ ಗುರುಸಿದ್ಧೇಶ್ವರ ಮಠದ ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳು ಹಾಗೂ ಸಂತೇಕಲ್ಲೂರ ಘನಮಠೇಶ್ವರ ಮಠದ ಗುರುಬಸವ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಆದಿಚುಂಚನಗಿರಿ ಶಾಖಾಮಠ ಹೇಮಗಿರಿ-ಧಾರವಾಡದ ಕಾರ್ಯದರ್ಶಿಗಳಾದ ಡಾ. ಜೆ.ಎನ್. ರಾಮಕೃಷ್ಣೇಗೌಡರನ್ನು ಸನ್ಮಾನಿಸಲಾಯಿತು. ಖ್ಯಾತ ಸಂಗೀತಗಾರರಾದ ಉಸ್ತಾದ ರೈಸ್ ಬಾಲೇಖಾನ್ ಅವರಿಂದ ಸಿತಾರ ವಾದನ ಹಾಗೂ ಹಿಂದೂಸ್ತಾನಿ ಗಾಯಕಿ ಡಾ. ವೀಣಾ ಬಡಿಗೇರ ಅವರಿಂದ ವಚನ ಸಂಗೀತ ನಡೆಯಿತು. ತೋಂಟದಾರ್ಯ ಮಠದ ಜಾತ್ರಾ ಸಮಿತಿ ಅಧ್ಯಕ್ಷರು-ಪದಾಧಿಕಾರಿಗಳು ಹಾಗೂ ಶ್ರೀಮಠದ ಸದ್ಭಕ್ತರು ಹಾಜರಿದ್ದರು.

ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟವಾದ ಡಾ. ಎನ್.ಜಿ. ಮಹಾದೇವಪ್ಪ ರಚಿಸಿದ `ದಾರ್ಶನಿಕ ಬಸವಣ್ಣ’, ಡಾ. ಶ್ರೀಧರ ಗಂಗನಗೌಡ ಗೌಡರ ರಚಿಸಿದ `ತೋಂಟದಾರ್ಯ ಮಠದ ಸಮಾಜಮುಖಿ ಚಳುವಳಿಗಳು; ವಿಶ್ಲೇಷಣಾತ್ಮಕ ಅಧ್ಯಯನ’, ಡಾ. ರಾಜಶೇಖರ ಜಮದಂಡಿ ರಚಿಸಿದ `ಷಟಸ್ಥಲ ಚಕ್ರವರ್ತಿ ಚನ್ನಬಸವಣ್ಣ’ ಗ್ರಂಥಗಳನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಬಿಡುಗಡೆ ಮಾಡಿದರು.

ಬಸವಾದಿ ಶರಣರ ವಚನಗಳಲ್ಲಿ ಅನೇಕ ವೈಜ್ಞಾನಿಕ ಮಜಲುಗಳಿವೆ. ಉದಾಹರಣೆಗೆ ಬಸವೇಶ್ವರರ `ಚಂದ್ರೋದಯಕ್ಕೆ ಅಂಭುದಿ ಹೆಚ್ಚುವುದಯ್ಯ’ ಎಂಬ ವಚನದಲ್ಲಿ ಗುರುತ್ವಾಕರ್ಷಣೆಯ ತತ್ವವು ಅಡಗಿದೆ. ಅಷ್ಟೇ ಅಲ್ಲದೇ ಇನ್ನೊಂದು ವಚನದಲ್ಲಿ ಬಸವೇಶ್ವರರು ಭೌತಶಾಸ್ತ್ರದ ಅಂಶಗಳಾದ ಕಾಲ, ಉದ್ದ, ದ್ರವ್ಯರಾಶಿಯ ಕುರಿತು ಮಹತ್ವದ ವ್ಯಾಖ್ಯಾನ ನೀಡಿದ್ದಾರೆ. ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿದ್ದು, ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

– ಡಾ. ನಾ. ಸೋಮೇಶ್ವರ.

ಖ್ಯಾತ ವಿಜ್ಞಾನ ಸಾಹಿತಿಗಳು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!