ತುಮಕೂರು: ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ನಡೆದ ಗುಜರಿ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಮದುವೆಯಾಗಿ ಕೇವಲ ಮೂರು ತಿಂಗಳಲ್ಲೇ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಗುಜರಿ ವ್ಯಾಪಾರಿ ಮನ್ಸೂರ್ ಪಾಷ ಹತ್ಯೆ ಪ್ರಕರಣದಲ್ಲಿ, ಫರ್ಜಾನ್ (31), ಧನರಾಜ್ (24), ವೆಂಕಟೇಶ್ (24) ಮತ್ತು ದರ್ಶನ್ (24) ಎಂಬ ನಾಲ್ಕು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಮನ್ಸೂರ್ ಕುಟುಂಬದ ನಿರ್ಧಾರದಂತೆ ಫರ್ಜಾನ್ ಎಂಬಾಕೆಯನ್ನು ಈ ವರ್ಷ ಜನವರಿಯಲ್ಲಿ ವಿವಾಹವಾಗಿದ್ದರು.
ಅದರಂತೆ ಮನ್ಸೂರ್ ಮಾರ್ಚ್ 4ರಂದು ಗುಜರಿ ವಸ್ತು ತರಲು ಹೋದಾಗ ನಾಪತ್ತೆ ಆಗಿದ್ದು, ತಪಾಸಣೆ ನಡೆಸಿದಾಗ ಅಡಕೆ ತೋಟದಲ್ಲಿ ಶವ ಪತ್ತೆಯಾಗಿತ್ತು.
ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಎಸ್, ಧನರಾಜ್ ಎಂಬಾತನ ಜೊತೆ ಮೃತ ಮನ್ಸೂರ್ ಪತ್ನಿ ಫರ್ಜಾನ ಸಂಬಂಧ ಹೊಂದಿದ್ದು, ಮನ್ಸೂರ್ ಕೊಲೆಗಾಗಿ ಹೆಂಡ್ತಿ ಹಾಗೂ ಪ್ರಿಯಕರ ಪ್ಲ್ಯಾನ್ ರೂಪಿಸಿದ್ದು ತಿಳಿದುಬಂದಿದೆ.
ಆರೋಪಿಗಳು ಮನ್ಸೂರ್ ನನ್ನು ಕರೆಸಿ ತರಾತುರಿಯಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಪರಾರಿಯಾಗಿದ್ದರೂ, ದರ್ಶನ್ ನ ಕರೆ ಮೂಲಕ ಅವರ ಸಂಪರ್ಕ ಗೊತ್ತಾಗಿ, ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



