ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ, ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅಮೆರಿಕದೊಂದಿಗೆ ಶಾಂತಿ ಮಾತುಕತೆ ನಡೆಸಲು ಸಮ್ಮತಿಸಿದ್ದಾರೆ ಎಂಬ ವರದಿ ಹೊರಬಂದಿದೆ.
ಸೌದಿ ಅರೇಬಿಯಾದ ‘ಅಲ್ ಅರೇಬಿಯಾ’ ಮಾಧ್ಯಮದ ವರದಿ ಪ್ರಕಾರ, ಖಮೇನಿ ಈ ನಿರ್ಧಾರಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಇರಾನ್ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.
ಇದೇ ವೇಳೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಕಳೆದ ಎರಡು ದಿನಗಳಲ್ಲಿ ಇರಾನ್ ಜೊತೆ ಉತ್ತಮ ಮತ್ತು ಫಲಪ್ರದ ಮಾತುಕತೆ ನಡೆದಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ, ಇರಾನ್‌ನ ವಿದ್ಯುತ್ ಸ್ಥಾವರಗಳು ಹಾಗೂ ಇಂಧನ ಮೂಲಸೌಕರ್ಯಗಳ ಮೇಲೆ ನಡೆಸಬೇಕಿದ್ದ ಮಿಲಿಟರಿ ದಾಳಿಗಳನ್ನು ಐದು ದಿನಗಳವರೆಗೆ ಮುಂದೂಡಲು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ಇದಕ್ಕೂ ಮೊದಲು, 48 ಗಂಟೆಗಳ ಒಳಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶ ಮಾಡುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಗಡುವಿನೊಳಗೆ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದ ಯುದ್ಧ ಸಂಭವಿಸುವ ಭೀತಿ ವ್ಯಕ್ತವಾಗಿತ್ತು.
ಆದರೆ ಅಮೆರಿಕದ ಈ ಬೆದರಿಕೆಗೆ ಜಗ್ಗದ ಇರಾನ್, ತಮ್ಮ ಇಂಧನ ಹಾಗೂ ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ನಡೆದರೆ ಮಧ್ಯಪ್ರಾಚ್ಯದ ಇತರ ದೇಶಗಳ ಇಂಧನ ವ್ಯವಸ್ಥೆಗಳನ್ನೂ ಗುರಿಯಾಗಿಸುತ್ತೇವೆ ಎಂದು ತಿರುಗೇಟು ನೀಡಿತ್ತು.



