ವಾಷಿಂಗ್ಟನ್: ಇರಾನ್ ವಿರುದ್ಧದ ಕಾರ್ಯಾಚರಣೆ ಗುರಿ ಈಡೇರುವವರೆಗೆ ನಿಲ್ಲುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಇನ್ನಷ್ಟು ಅಮೆರಿಕ ಸೈನಿಕರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಅವರು ತಿಳಿಸಿದ್ದಾರೆ.
ಟ್ರೂತ್ ಸೋಷಿಯಲ್ನಲ್ಲಿ ಹಂಚಿಕೊಂಡಿರುವ ವಿಡಿಯೋ ಸಂದೇಶದಲ್ಲಿ ಟ್ರಂಪ್, ಇರಾನ್ ವಿರುದ್ಧದ ಯುದ್ಧವನ್ನು “ಅಸ್ತಿತ್ವವಾದದ ಬೆದರಿಕೆ”ಗೆ ಪ್ರತಿಕ್ರಿಯೆ ಎಂದು ವಿವರಿಸಿದ್ದಾರೆ.
ಕ್ಷಿಪಣಿಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇರಾನ್ ಆಡಳಿತವು ಪ್ರತಿಯೊಬ್ಬ ಅಮೆರಿಕನ್ನಿಗೂ ಭೀಕರ ಅಪಾಯವೆಂದು ಅವರು ಆರೋಪಿಸಿದರು. ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನು ದೃಢಪಡಿಸಿರುವ ಟ್ರಂಪ್, “ಅವನು ಅನೇಕ ಅಮೆರಿಕನ್ನರು ಮತ್ತು ಮುಗ್ಧ ಜನರ ಸಾವಿಗೆ ಕಾರಣವಾದ ನೀಚ ವ್ಯಕ್ತಿ” ಎಂದು ಕಟುವಾಗಿ ಟೀಕಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಟ್ರಂಪ್ ಹೇಳಿಕೆ ಜಾಗತಿಕ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.



