ಜೆರುಸಲೇಂ: ಯುದ್ಧದಲ್ಲಿ ಇಸ್ರೇಲ್ ಮೇಲುಗೈ ಸಾಧಿಸುತ್ತಿದ್ದು, ಇರಾನ್ ತೀವ್ರ ಹಾನಿಗೊಳಗಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇತ್ತೀಚೆಗೆ ತಮ್ಮ ಸಾವಿನ ಬಗ್ಗೆ ಹರಿದಾಡಿದ ವದಂತಿಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನೆತನ್ಯಾಹು, ಸುದ್ದಿಗೋಷ್ಠಿ ನಡೆಸಿ ಆ ವದಂತಿಗಳಿಗೆ ತೆರೆ ಎಳೆದರು.
ಈ ವೇಳೆ ಮಾತನಾಡಿದ ಅವರು, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸುಮಾರು 20 ದಿನಗಳ ವೈಮಾನಿಕ ದಾಳಿಗಳ ಪರಿಣಾಮ ಇರಾನ್‌ನ ಸೈನಿಕ ಸಾಮರ್ಥ್ಯಕ್ಕೆ ಗಂಭೀರ ಹೊಡೆತ ಬಿದ್ದಿದೆ ಎಂದು ತಿಳಿಸಿದ್ದಾರೆ.
ಇರಾನ್ ಇನ್ನು ಮುಂದೆ ಯುರೇನಿಯಂ ಸಮೃದ್ಧೀಕರಣ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳ ನಿರ್ಮಾಣದಲ್ಲಿ ಸಾಮರ್ಥ್ಯ ಕಳೆದುಕೊಂಡಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
“ನಾನು ಯುದ್ಧದಲ್ಲಿ ಮೃತಪಟ್ಟಿಲ್ಲ, ನೀವು ನೋಡುತ್ತಿರುವಂತೆ ನಾನು ಬದುಕಿದ್ದೇನೆ,” ಎಂದು ಹೇಳಿದ ಅವರು, ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹಗಳಿಗೂ ಭಾರೀ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಇದರಿಂದ ಇರಾನ್‌ಗೆ ಪರಮಾಣು ಶಸ್ತ್ರಾಸ್ತ್ರ ನಿರ್ಮಾಣ ಸಾಧ್ಯತೆ ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



