ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವ ನಡುವೆಯೇ ಜಾಗತಿಕ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ.
ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಸುಮಾರು 2 ಟ್ರಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ಕರಗಿದೆಯೆಂದು ಅಂತರರಾಷ್ಟ್ರೀಯ ಹಣಕಾಸು ವಿಶ್ಲೇಷಣಾ ವರದಿಗಳು ತಿಳಿಸಿವೆ.
ಸಾಮಾನ್ಯವಾಗಿ ಷೇರು ಮಾರುಕಟ್ಟೆ ಕುಸಿದಾಗ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಆದರೆ ಈ ಬಾರಿ ವಿಭಿನ್ನ ಬೆಳವಣಿಗೆ ಕಂಡುಬಂದಿದ್ದು, ಷೇರು ಮಾರುಕಟ್ಟೆಯ ಜೊತೆಗೆ ಚಿನ್ನ ಮತ್ತು ಬೆಳ್ಳಿ ದರವೂ ಕುಸಿದಿರುವುದು ಗಮನಾರ್ಹವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಅಸಾಮಾನ್ಯ ಪರಿಸ್ಥಿತಿ ಉಂಟಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ನೀಡಿದ ಎಚ್ಚರಿಕೆ ಹಾಗೂ ಹಾರ್ಮುಜ್ ಜಲಸಂಧಿ ಕುರಿತ ಉದ್ವಿಗ್ನತೆ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಈ ಬೆಳವಣಿಗೆಯಿಂದ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುತ್ತಿರುವುದು ಕುಸಿತಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಉಳಿಸಿರುವುದರಿಂದ ಅಮೆರಿಕದ ಬಾಂಡ್‌ಗಳ ಮೇಲೆ ಹೂಡಿಕೆ ಹೆಚ್ಚಾಗಿದೆ. 10 ವರ್ಷದ ಬಾಂಡ್ ಇಳುವರಿ ಏರಿಕೆಯಿಂದ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದವರು ಡಾಲರ್ ಆಧಾರಿತ ಹೂಡಿಕೆಗಳತ್ತ ತಿರುಗುತ್ತಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮವಾಗಿ ಕಚ್ಚಾ ತೈಲದ ಬೆಲೆ ಏರಿಕೆ ಕಂಡಿದ್ದು, ಹಲವಾರು ದೇಶಗಳಲ್ಲಿ ಇಂಧನ ದರ ಹೆಚ್ಚಾಗಿದೆ. ಇದರಿಂದ ಕೆಲವು ರಾಷ್ಟ್ರಗಳು ತಮ್ಮಲ್ಲಿರುವ ಚಿನ್ನವನ್ನು ಮಾರಾಟ ಮಾಡಲು ಮುಂದಾಗಿವೆ ಎಂಬ ವರದಿಗಳು ಬಂದಿವೆ. ಜೊತೆಗೆ ವಿಮಾನ ಸಂಚಾರ ವ್ಯತ್ಯಯಗೊಂಡಿರುವುದರಿಂದ ಚಿನ್ನದ ವ್ಯಾಪಾರಕ್ಕೂ ತೊಂದರೆ ಉಂಟಾಗಿದೆ.
ಭಾರತದಲ್ಲಿಯೂ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಫ್ಯೂಚರ್ ದರಗಳು ಕುಸಿತ ಕಂಡಿವೆ. ಕಳೆದ ವಾರ 10 ಗ್ರಾಂ ಚಿನ್ನದ ಫ್ಯೂಚರ್ ದರ 1,44,492 ರೂ. ಇದ್ದರೆ, ಈಗ ಸುಮಾರು 10 ಶೇಕಡಕ್ಕೂ ಹೆಚ್ಚು ಇಳಿಕೆಯಾಗಿದ್ದು 1,29,595 ರೂ. ಮಟ್ಟಕ್ಕೆ ಬಂದಿದೆ.
ಈ ಬೆಳವಣಿಗೆ ಹೂಡಿಕೆದಾರರಲ್ಲಿ ಆತಂಕವನ್ನುಂಟುಮಾಡಿದ್ದು, ಜಾಗತಿಕ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.



