ಚಿಕ್ಕಮಗಳೂರು: ಯುಗಾದಿ ಹಬ್ಬದ ದಿನವೇ ದೇವಾಲಯದ ಎದುರು ವಾಮಾಚಾರ ನಡೆಸಿರುವ ಘಟನೆ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿ ನಡೆದಿದೆ.
ಅಮಾವಾಸ್ಯೆ ಹಿನ್ನೆಲೆ ಕಳೆದ ರಾತ್ರಿ ದುಷ್ಕರ್ಮಿಗಳು ಕಾಲಭೈರವೇಶ್ವರನ ಗುಡಿಯ ಮುಂಭಾಗದಲ್ಲಿ ವಾಮಾಚಾರ ನಡೆಸಿದ್ದಾರೆ. ದೇವಸ್ಥಾನದ ಎದುರು ದೊಡ್ಡ ಕಲ್ಲುಗಳನ್ನು ವೃತ್ತಾಕಾರವಾಗಿ ಇಟ್ಟು, ಅದರ ಮಧ್ಯಭಾಗದಲ್ಲಿ ಕೃತ್ಯ ಎಸಗಲಾಗಿದೆ. ಅರಿಶಿನ, ಕುಂಕುಮ, ನಿಂಬೆಹಣ್ಣು, ತೆಂಗಿನಕಾಯಿ, ಕುಂಬಳಕಾಯಿ ಹಾಗೂ ನಾಣ್ಯಗಳನ್ನು ಬಳಸಿರುವುದು ಕಂಡುಬಂದಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕಳಸದ ಕಳಸೇಶ್ವರ ಸ್ವಾಮಿ ದೇವಸ್ಥಾನ ವ್ಯಾಪ್ತಿಗೆ ಸೇರಿದ ಈ ಕಾಲಭೈರವೇಶ್ವರನ ಗುಡಿ ಅತ್ಯಂತ ಪುರಾತನವಾಗಿದೆ. ಪ್ರತಿವರ್ಷ ಕಳಸೇಶ್ವರ ದೇವಸ್ಥಾನದ ಗಿರಿಜಾ ಕಲ್ಯಾಣ ರಥೋತ್ಸವ ಇದೇ ಮಾರ್ಗವಾಗಿ ಸಾಗುತ್ತದೆ.
ಕಳೆದ ವರ್ಷವೂ ಯುಗಾದಿ ಹಬ್ಬದ ಮುನ್ನಾದಿನ ಈ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. ಇದೀಗ ಹಬ್ಬದ ದಿನವೇ ಜನಸಂಚಾರ ಹೆಚ್ಚಿರುವ ಪ್ರದೇಶದಲ್ಲಿ ಇಂತಹ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.



