ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸಿರುವ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಕೂಡಲೇ ಹಿಂಪಡಿಯಬೇಕೆಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಅಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದಲ್ಲಿ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದ್ದು, ಜನ ಸಂಕಷ್ಟದಲ್ಲಿದ್ದಾರೆ. ಇಂಥಹ ಸಂಧರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ನೆರವು ನೀಡುವ ಬದಲು ರಾಜ್ಯದಲ್ಲೂ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ.
ಬಸ್ ಪ್ರಯಾಣ ದರ ಇದ್ದಕಿದ್ದಂತೆ ಶೇ. 15ರಷ್ಟು ಏರಿಕೆ ಮಾಡುವ ನಿರ್ಧಾರ ಖಂಡನೀಯ. ಗ್ಯಾರಂಟಿ ಯೋಜನೆಯಿಂದ ಆಗುವ ನಷ್ಟದ ಹೊರೆಯನ್ನು ಜನರ ಮೇಲೆ ಯಾವುದೇ ಕಾರಣಕ್ಕೂ ಹಾಕಬಾರದು. ಯೋಜನೆ ನಡೆಸಲು ಸಮರ್ಥ ಕಾರ್ಯತಂತ್ರ ರೂಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.



