ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲಿ ನಡೆದ ಜಗಳ ದುರಂತಕ್ಕೆ ಎಡೆಮಾಡಿಕೊಟ್ಟಿದೆ. ಎಸ್, ಜಗಳದ ಬಳಿಕ ಮಲಗಿದ್ದ ಗಂಡನ ಮರ್ಮಾಂಗಕ್ಕೆ ಹೆಂಡತಿ ಒದ್ದು ಗಂಭೀರವಾಗಿ ಹಲ್ಲೆ ಮಾಡಿದ್ದಾಳೆ.
ಗಂಡ ಹೆಂಡತಿ ಇಬ್ಬರು ಕಳೆದ ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ನಂತರ ಮಹಿಳೆ ಚಿತ್ರ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದಳಂತೆ. ವಿನಾಕಾರಣ ಗಂಡನ ಜೊತೆ ಕ್ಯಾತೆ ತೆಗೆದು ಜಗಳ ಮಾಡುತ್ತಿದ್ದಳಂತೆ. ಇದೇ ರೀತಿ ಬೆಳಿಗ್ಗೆ ಗಂಡನ ಬಟ್ಟೆ ಹರಿದು ಹಾಕಿ ಜೋರು ಗಲಾಟೆ ಮಾಡಿದ್ದಳಂತೆ. ನಂತರ ಮಧ್ಯರಾತ್ರಿ ಮನೆಯಲ್ಲಿ ಮಲಗಿದ್ದ ಗಂಡನ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಳೆ.
ಬಳಿಕ ಆತನೇ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬೆಳಗ್ಗೆ ಗಂಡನ ನೋಡಲು ಆಸ್ಪತ್ರೆಗೆ ಬಂದ ಮಹಿಳೆಗೆ ಗಂಡನನ್ನ ನೋಡಲು ಕುಟುಂಬಸ್ಥರು ಅವಕಾಶ ನೀಡಿಲ್ಲ. ಇದಾದ ಬಳಿಕ ಪೊಲೀಸರಿಗೆ ಕುಟುಂಬಸ್ಥರು ದೂರು ಕೊಟ್ಟಿದ್ದಾರೆ. ದೂರು ಬೆನ್ನಲ್ಲೇ ಮಹಿಳೆಯು ಕ್ರೀಮಿನಾಶಕ ಸೇವಿಸಿ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಮಹಿಳೆಯನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.



