ಹಾಸನ:- ಜಿಲ್ಲೆಯ ಸಕಲೇಶಪುರದ ಗಾಳಿಗುಡ್ಡ ಗ್ರಾಮದಲ್ಲಿ ವಿದ್ಯುತ್ ಕಂಬ ಮುರಿದುಬಿದ್ದು ಮಹಿಳೆಗೆ ಗಂಭೀರ ಗಾಯವಾಗಿರುವ ಘಟನೆ ಜರುಗಿದೆ.
ಘಟನೆ ಹಿನ್ನೆಲೆ ಚೆಸ್ಕಾಂ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಗಾಯಗೊಂಡ ಮಹಿಳೆಯನ್ನು 45 ವರ್ಷದ ಶಾರದ ಎಂದು ಗುರುತಿಸಲಾಗಿದೆ. ಮಹಿಳೆ, ಮನೆಯಿಂದ ಹೊರಗೆ ಬಂದಿದ್ದ ವೇಳೆ ವಿದ್ಯುತ್ ಕಂಬ ಏಕಾಏಕಿ ಮುರಿದುಬಿದ್ದಿದೆ. ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿದ್ಯುತ್ ಕಂಬ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಬದಲಿಸುವಂತೆ ಗ್ರಾಮಸ್ಥರು ಹಲವು ಬಾರಿ ಚೆಸ್ಕಾಂಗೆ ಮನವಿ ಮಾಡಿದ್ದರು. ಆದರೆ ವಿದ್ಯುತ್ ಕಂಬ ಬದಲಿಸದೇ ಚೆಸ್ಕಾಂ ಅಧಿಕಾರಿಗಳು ಹಾಗೂ ನೌಕರರು ನಿರ್ಲಕ್ಷ್ಯ ತೋರಿದ್ದು ಅಧಿಕಾರಿಗಳ ನಿರ್ಲಕ್ಷತನದಿಂದಲೇ ಅವಘಡ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಲ್ಲದೇ ಈ ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



