ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ಬಿಜೆಪಿ ಮಂಡಲದ ವತಿಯಿಂದ ರೈತರ ಸಮಸ್ಯೆ ಬಗೆಹರಿಸುವಂತೆ ತಹಸೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಅತಿವೃಷ್ಟಿಯಿಂದ ಕಟಾವಿಗೆ ಬಂದಿದ್ದ ಹೆಸರು ಬೆಳೆ ಸಂಪೂರ್ಣವಾಗಿ ಮಣ್ಣುಪಾಲಾಗಿ ತುಂಬಲಾರದ ಹಾನಿಯಾಗಿದೆ. ಮೆಕ್ಕೆಜೋಳ ಇಳುವರಿಯ ಮೇಲೂ ಇದರ ಪರಿಣಾಮ ಬೀರಿದೆ. ಮೆಕ್ಕೆಜೋಳ ಅಲ್ಪಸ್ವಲ್ಪ ಇಳುವರಿ ಬಂದಿದ್ದರೂ ಕೂಡಾ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲ. ಕೇಂದ್ರ ಸರಕಾರ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2400 ರೂ.ಗಳ ಎಂಎಸ್ಪಿಯನ್ನು ನಿರ್ಧಾರ ಮಾಡಿದ್ದು, ರಾಜ್ಯ ಸರಕಾರ ಈ ಬಗ್ಗೆ ಕ್ರಮವಹಿಸಿ ಬೆಂಬಲಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕಾಗಿದೆ.
ಆದ್ದರಿಂದ ರಾಜ್ಯ ಸರಕಾರವು ರೈತರ ಗಂಭೀರ ಸಮಸ್ಯೆಗಳನ್ನು ಮನಗಂಡು ಬೆಳೆಹಾನಿ, ಬೆಳೆ ವಿಮಾ, ಬೆಂಬಲ ಬೆಲೆ ಯೋಜನೆಯಡಿ ರೈತರ ಉತ್ಪನ್ನಗಳ ಖರೀದಿ ಮಾಡಿ ರೈತರ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲು ತ್ವರಿತಗತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಫಕ್ಕೀರೇಶ ರಟ್ಟಿಹಳ್ಳಿ, ಬಿ.ಡಿ. ಪಲ್ಲೇದ, ಸಂದೀಪ ಕಪ್ಪತ್ತನವರ, ಜಾನು ಲಮಾಣಿ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ವೀರಣ್ಣ ಅಂಗಡಿ, ಪ್ರವೀಣಗೌಡ ಪಾಟೀಲ, ಗೂಳಪ್ಪ ಕರಿಗಾರ, ರಾಮಣ್ಣ ಕಂಬಳಿ, ಶಿವು ಲಮಾಣಿ, ಶ್ರೀನಿವಾಸ ಬಾರಬಾರ, ಸಂತೋಷ ತೋಡೆಕರ ಸೇರಿದಂತೆ ಕಾರ್ಯಕರ್ತರು ಮತ್ತು ರೈತರು ಉಪಸ್ಥಿತರಿದ್ದರು.
ಈಗಾಗಲೇ ಹೆಸರು ಖರೀದಿ ಕೇಂದ್ರಗಳನ್ನು ತಡವಾಗಿ ಆರಂಭಿಸಿರುವದರಿಂದ ರೈತರಿಗೆ ಅದರಿಂದ ಯಾವುದೇ ಪ್ರಯೋಜನ ವಿಲ್ಲ, ಮಧ್ಯವರ್ತಿಗಳಿಗೆ ಮಾತ್ರ ಇದರ ಲಾಭವಾಗುತ್ತಿದೆ. ಆದ್ದರಿಂದ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಕೂಡಲೇ ಸ್ಥಾಪಿಸಬೇಕು. ಕಬ್ಬು ಬೆಳೆಗಾರರಿಗೆ ಸರ್ಕಾರ ಯಾವುದೇ ಸ್ಪಂದನೆ ನೀಡುತ್ತಿಲ್ಲ, ಈರುಳ್ಳಿ ಬೆಲೆ ಕುಸಿತ ಕಂಡಿದೆ. ಬೆಳೆ ಹಾನಿ ಸಮೀಕ್ಷೆಯನ್ನು ಕಟಾಕ್ಷಕ್ಕೆ ಮಾಡಿರುವದರಿಂದ ಬೆಳೆಹಾನಿ ಪರಿಹಾರ ವಿತರಣೆ ಮಾಡಿಲ್ಲ. ಬೆಳೆ ವಿಮಾ ಯೋಜನೆಯಲ್ಲಿ ಸಂಪೂರ್ಣವಾಗಿ ಮಧ್ಯವರ್ತಿಗಳು ಶಾಮೀಲಾಗಿದ್ದು, ಸರಕಾರದ ಗಮನಕ್ಕೆ ಬಂದರೂ ಕೂಡಾ ಕಣ್ಮುಚ್ಚಿ ಕುಳಿತಿದೆ ಎಂದು ಮುಖಂಡರು ಹೇಳಿದರು.



