ವಿಜಯಸಾಕ್ಷಿ ಸುದ್ದಿ, ಗದಗ : ತಾಯಿಯ ಎದೆಹಾಲು ಅಮೃತಕ್ಕೆ ಸಮಾನ, ತಾಯಿಯ ಎದೆಹಾಲು ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ ಎಂದು ಜಿಲ್ಲಾ ಆರ್‌ಸಿಹೆಚ್‌ಓ ಅಧಿಕಾರಿ ಡಾ. ಮೀನಾಕ್ಷೀ ಕೆ.ಎಸ್ ಹೇಳಿದರು.
ನಗರದ ದಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಐಎಪಿ ಇವರ ಸಹಯೋಗದೊಂದಿಗೆ ಗರ್ಭಿಣಿ/ಬಾಣಂತಿಯರಿಗೆ ಸ್ತನ್ಯಪಾನದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಯಿಯ ಎದೆಹಾಲಿನಲ್ಲಿರುವ ರೋಗ ನಿರೋಧಕ ಶಕ್ತಿಯು ಮಗುವಿನ ಸಂಪೂರ್ಣ ಬೆಳವಣಿಗೆಗೆ ಸಹಾಯಕವಾಗಿದೆ. ಕಾಂಗರೂ ವಿಧಾನದವನ್ನು ಅನುಸರಿಸಿ ತಾಯಿ ಮಗುವನ್ನು ರಕ್ಷಣೆ ಮಾಡಬೇಕು. ತಾಯಿಯ ಎದೆ ಹಾಲು ಮಗುವಿನ ಬೆಳವಣಿಗೆಗೆ ಹೆಚ್ಚು ಶಕ್ತಿದಾಯಕ ಮತ್ತು ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ತನ್ಯಪಾನವನ್ನು ಬೆಂಬಲಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಜಿಮ್ಸ್ನ ಚಿಕ್ಕ ಮಕ್ಕಳ ತಜ್ಞ ಡಾ. ಈರಣ್ಣ ಹಳೇಮನಿ, ಡಾ. ಪ್ರೀತ ಕೋನ, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.



