ಬೆಂಗಳೂರು:- ಬಿಹಾರ ಚುನಾವಣೆಗೆ ಸಿಎಂ, ಡಿಸಿಎಂ 300 ಕೋಟಿ ರೂ. ಕಪ್ಪ ಕಾಣಿಕೆ ನೀಡಿದ್ದಾರೆ ಎಂಬ ಶ್ರೀರಾಮುಲು ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷಕ್ಕೆ ಹಣ ನೀಡಿದ್ದು, ಅದನ್ನೇ ನಾವು ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ ಎಂದು ಲೇವಡಿ ಮಾಡಿದರು.
ಟನಲ್ ರಸ್ತೆ ಮಾಡಲು ಬಿಡುವುದಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಕುರಿತು ಮಾತನಾಡಿ, ನಾನು ಈ ವಿಚಾರದಲ್ಲಿ ತಾಂತ್ರಿಕ ತಜ್ಞ ಅಲ್ಲ. ಅವರೂ ತಜ್ಞರಲ್ಲ. ಅದಕ್ಕಾಗಿಯೇ ಪ್ರತ್ಯೇಕ ತಾಂತ್ರಿಕ ತಜ್ಞರ ತಂಡವೇ ಇದೆ. ಅವರು ನಗರ ರೈಲು ಯೋಜನೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಅದನ್ನು ಮಾಡಲಿ, ಅದರಲ್ಲಿ ತಪ್ಪೇನು ಇಲ್ಲ. ಇದಕ್ಕೆ ಅಗತ್ಯವಾದ ಅನುದಾನವನ್ನು ಕೇಂದ್ರ ಸರ್ಕಾರದಿಂದ ಕೊಡಿಸಲಿ. ನಮ್ಮದೇ ರಾಜ್ಯದ ಸೋಮಣ್ಣ ಅವರು ಕೇಂದ್ರ ಸಚಿವರಾಗಿದ್ದಾರೆ. ಅವರ ನೆರವು ಪಡೆಯಲಿ, ಏನು ಬೇಕಾದರೂ ಮಾಡಲಿ. ಅವರು ಹೋರಾಟ ಮಾಡುವುದಾದರೆ ಮಾಡಲಿ, ಬೇಡ ಎಂದು ಹೇಳಿದವರು ಯಾರು? ಬಿಜೆಪಿಯಲ್ಲಿ ತೇಜಸ್ವಿ ಸೂರ್ಯ ಹಾಗೂ ಅಶೋಕ್ ಹೊರತಾಗಿ ಉಳಿದ ಯಾವುದೇ ನಾಯಕರು ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ರಾಜ್ಯಕ್ಕೆ ರಾಹುಲ್ ಗಾಂಧಿ ಅವರ ಭೇಟಿಗೆ ಸಂಬಂಧಿಸಿದಂತೆ ಇನ್ನೂ ದಿನಾಂಕ ಅಂತಿಮವಾಗಿಲ್ಲ. ನಾನು ಮನವಿ ಸಲ್ಲಿಸಿದ್ದೇನೆ. ಕಚೇರಿ ನಿರ್ಮಾಣ ಜಾಗದ ಕಾಗದ ಪತ್ರ ಸಿದ್ಧವಾಗುತ್ತಿದೆ. ಈ ಕಚೇರಿ ನಿರ್ಮಾಣ ವಿಚಾರದಲ್ಲಿ ಸಚಿವರು, ಸಂಸದರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಯಾರ‍್ಯಾರು ಆಸಕ್ತಿ ತೋರಿದ್ದಾರೆ, ಯಾರು ತೋರಿಲ್ಲ ಎಂದು ವರದಿ ನೀಡುವಂತೆ ಹೈಕಮಾಂಡ್ ನಾಯಕರು ಕೇಳಿದ್ದಾರೆ. ನಾನು ವರದಿ ಸಿದ್ಧಪಡಿಸುತ್ತಿದ್ದು, ಅದನ್ನು ಕಳುಹಿಸಬೇಕು. ಆನಂತರ ಆವರು ದಿನಾಂಕ ನಿಗದಿ ಮಾಡುತ್ತಾರೆ ಎಂದರು.


