ಬಿಗ್ ಬಾಸ್ ಮನೆ ಇದೀಗ ಸಂಪೂರ್ಣವಾಗಿ ಎರಡು ಬಣಗಳಾಗಿ ಬದಲಾಗಿದೆ. ವೈಲ್ಡ್ ಕಾರ್ಡ್ ಮೂಲಕ ಬಂದ ರಜತ್ ವಿರುದ್ಧ ಇಡೀ ಮನೆ ಒಂದಾಗಿದ್ದು, ಗಿಲ್ಲಿಯೊಂದಿಗೆ ಇದ್ದ ಸ್ನೇಹವೂ ಒಂದೇ ಕ್ಷಣದಲ್ಲಿ ಶತ್ರುತ್ವಕ್ಕೆ ತಿರುಗಿದೆ.
ಆಕ್ರಮಣಕಾರಿ ಮಾತು, ಡಾಮಿನೇಟ್ ಮಾಡುವ ಆಟ ಇವೆಲ್ಲದರಿಂದ ರಜತ್ ಈಗಾಗಲೇ ಹಲವರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ. ಅದಕ್ಕೇ ಗಿಲ್ಲಿಯನ್ನು ಹತ್ತಿರ ಇಟ್ಟುಕೊಂಡಿದ್ದರು. ಆದರೆ ನಾಮಿನೇಷನ್ ವೇಳೆ ಬಂದ ಒಂದು ಮಾತೇ ಗಿಲ್ಲಿಯ ಮನಸ್ಸಿಗೆ ತೀವ್ರವಾಗಿ ತಾಕಿ, ಸ್ನೇಹ ಮುರಿಯುವಂತಾಯಿತು.
ಭಾನುವಾರದ ಎಪಿಸೋಡ್ನಲ್ಲಿ ಸುದೀಪ್ ನಡೆಸಿದ ‘ಪಾಪದ ಕೊಡ’ ಆಟದಲ್ಲಿ ಬಹುತೇಕ ಸ್ಪರ್ಧಿಗಳು ರಜತ್ ಅವರ ಕೊಳಕ್ಕೆ ಕಪ್ಪು ನೀರು ಸುರಿಸಿದರು. ಕೊನೆಗೆ ಗಿಲ್ಲಿಯೂ ಅದೇ ಮಾಡಿದಾಗ ರಜತ್ ಕೋಪಗೊಂಡರು. “ಗಿಲ್ಲಿ ಕೊಟ್ಟ ಕಾರಣವೂ ಬೇಜಾರಾಯ್ತು” ಎಂದ ರಜತ್ಗೆ, “ನನ್ನ ಎದುರೇ ನಮ್ಮನ್ನೆಲ್ಲ ದಡ್ಡರು ಎಂದು ಕರೆದಿದ್ದಾರೆ” ಎಂದು ಗಿಲ್ಲಿ ತಿರುಗೇಟು ನೀಡಿದರು.
ಇಲ್ಲಿಂದಲೇ ಆಟ ತೀವ್ರ ತಿರುವು ಪಡೆದಿತು. “ನನಗೆ ನೀರು ಹಾಕಿದವರೆಲ್ಲ ಮನೆಗೆ ಹೊರಹೋಗುವವರೆಗೂ ನಾನು ಇಲ್ಲೇ ಇರುತ್ತೇನೆ” ಎಂದು ರಜತ್ ಸುದೀಪ್ ಎದುರೇ ಸವಾಲು ಹಾಕಿದರೆ, “ರಜತ್ ಮನೆ ಬಿಟ್ಟ ಮೇಲೆಯೇ ನಾನು ಹೊರಗೆ ಹೋಗುತ್ತೇನೆ” ಎಂದು ಗಿಲ್ಲಿ ಪ್ರತಿಸವಾಲು ಎಸೆದರು.
ಆಮೇಲೂ ಮಾತಿನ ಚಕಮಕಿ ಮುಂದುವರಿದಿದ್ದು, “ಗಿಲ್ಲಿಗೆ ಟಾಸ್ಕ್ ಆಡೋಕೇ ಬರಲ್ಲ” ಎಂಬ ರಜತ್ ಮಾತಿಗೆ, “ಆಡಿದ ಹತ್ತು ಟಾಸ್ಕ್ಗಳಲ್ಲಿ ಎಂಟನ್ನು ನಾನು ಗೆದ್ದಿದ್ದೇನೆ” ಎಂದು ಗಿಲ್ಲಿ ಕಾಲೆಳೆದರು. ಸುದೀಪ್ ಎದುರೇ ನಡೆದ ಈ ಹೋರಾಟ ಪ್ರೇಕ್ಷಕರ ಕುತೂಹಲವನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ದಿದೆ.



