ಮಂಡ್ಯ: ಪಾಂಡವಪುರದ ಕನಗನಹಳ್ಳಿಯಲ್ಲಿ ಹಳೆಯ ವೈಷಮ್ಯದಿಂದ ಹುಟ್ಟಿದ ಕ್ರೂರ ಹಲ್ಲೆ ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಯೋರ್ವಳ ಪ್ರೀತಿಗೆ ಸಂಬಂಧಪಟ್ಟ ದ್ವೇಷದಿಂದ, ಪ್ರಕಾಶ್ ಮತ್ತು ನವೀನ್ ಅವರನ್ನು ಗಿರೀಶ್, ಮದ್ದಪ್ಪ, ಪ್ಲಗ್ ಮಂಜ, ಗಣೇಶ, ಶಿವಣ್ಣ, ನಿಂಗಣ್ಣ ಸೇರಿ ಒಟ್ಟು 14 ಮಂದಿ ಕಿಡಿಗೇಡಿಗಳು ಕಲ್ಲಿನಿಂದ ಹಲ್ಲೆ ನಡೆಸಿ ನವೀನ್ ಕಾಲನ್ನು ಜಜ್ಜಿ ಹಾಕಿದ್ದರು. ಭೀಕರ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿದುಬಿಟ್ಟಿದ್ದರು.
ಘಟನೆ ಬಗ್ಗೆ ದೂರು ದಾಖಲಾಗುತ್ತಲೇ, ಪಾಂಡವಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶರತ್ ಕುಮಾರ್ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡವು ಮೊದಲ ದಿನದಲ್ಲೇ ಇಬ್ಬರನ್ನು ಬಂಧಿಸಿತು, ಬಳಿಕ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಸಂಬಂಧಿಕರ ಮನೆಗಳಲ್ಲಿ ಅಡಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ 14 ಆರೋಪಿಗಳ ಪೈಕಿ 11 ಮಂದಿ ಬಂಧನವಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.



