ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಹಾಗೂ ನಟಿಯರ ವಿರುದ್ಧ ನಡೆಯುತ್ತಿರುವ ಆನ್ಲೈನ್ ಕಿರುಕುಳ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿ ಕನ್ನಡ ನಟಿ ಚೈತ್ರಾ ಆಚಾರ್ ಅವರಿಗೆ ಅಸಭ್ಯ ಸಂದೇಶ ಕಳುಹಿಸಿದ್ದ ಆರೋಪದಡಿ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬನೇ ವಿವಾದದ ಕೇಂದ್ರಬಿಂದುವಾಗಿದ್ದಾನೆ.
ನಟಿ ಚೈತ್ರಾ ಆಚಾರ್ ಅವರಿಗೆ ಹೊಸಮನಿ ಎಂಬ ವ್ಯಕ್ತಿ ಕೀಳು ಮಟ್ಟದ ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ. ಆತ ಪೊಲೀಸ್ ಇಲಾಖೆಗೆ ಸೇರಿದವನಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.
ಘಟನೆಯ ನಂತರ ಚೈತ್ರಾ ಆಚಾರ್ ಯಾವುದೇ ಮುಲಾಜಿಲ್ಲದೆ ಆ ವ್ಯಕ್ತಿ ಕಳುಹಿಸಿದ್ದ ಸಂದೇಶಗಳ ಸ್ಕ್ರೀನ್ಶಾಟ್ ಹಾಗೂ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರಕರಣ ವೈರಲ್ ಆದ ಬಳಿಕ ಆರೋಪಿಯು ನಟಿಗೆ ಕ್ಷಮೆಯಾಚನೆ ಸಲ್ಲಿಸಿದ್ದಾನೆ. ‘ತಪ್ಪಾಗಿದೆ, ನಿಮ್ಮ ಮೇಲಿನ ಕಾಳಜಿಯಿಂದಲೇ ಸಂದೇಶ ಕಳುಹಿಸಿದ್ದೆ. ಪೋಸ್ಟ್ ಡಿಲೀಟ್ ಮಾಡಿದರೆ ನನ್ನ ಕೆಲಸ ಉಳಿಯುತ್ತದೆ’ ಎಂದು ಮನವಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಆದರೆ ನಟಿ ಇದಕ್ಕೂ ಮಣಿಯದೆ, ಆ ಕ್ಷಮೆಯಾಚನೆಯ ಸ್ಕ್ರೀನ್ಶಾಟ್ನನ್ನೂ ಸಾರ್ವಜನಿಕಗೊಳಿಸಿದ್ದಾರೆ. ‘ನನ್ನ ವೃತ್ತಿಯ ಬಗ್ಗೆ ಅವಹೇಳನ ಮಾಡುವಾಗ ಇದು ನೆನಪಾಗಲಿಲ್ಲವೇ?’ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.
ಚೈತ್ರಾ ಆಚಾರ್ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ನಡೆಯುವ ಕಿರುಕುಳದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದು, ಅಸಭ್ಯ ವರ್ತನೆ ತೋರಿದವರನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಸದ್ಯ ಅವರು ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ಸಕ್ರಿಯರಾಗಿದ್ದು, ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.



