HomeGadag Newsಬೆಳೆ ಹಾನಿ ಸಮೀಕ್ಷೆ ನಿಖರವಾಗಿರಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ಬೆಳೆ ಹಾನಿ ಸಮೀಕ್ಷೆ ನಿಖರವಾಗಿರಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮುಂದುವರಿದಿರುವ ಮಳೆ ಕೊರತೆ ಹಾಗೂ ಬೆಳೆಗಳ ಹಾನಿಯ ಹಿನ್ನೆಲೆಯಲ್ಲಿ ನಿಖರ ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಅಗತ್ಯ ನೆರವು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜುಲೈ 15ರ ಬಳಿಕವೂ ಮಳೆ ಕೊರತೆ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ಬಹುತೇಕ ಕಡೆಗಳಲ್ಲಿ ಮರುಬಿತ್ತನೆಗೆ ಅವಕಾಶ ಕಡಿಮೆ ಇದೆ. ಬಿತ್ತನೆ ಆಗದೇ ಉಳಿದ ಜಮೀನುಗಳಲ್ಲಿ ಅಲ್ಪಾವಧಿಯ ಈರುಳ್ಳಿ ಹಾಗೂ ತರಕಾರಿ ಬೆಳೆಗಳ ಕುರಿತು ರೈತರಿಗೆ ಕೃಷಿ ಇಲಾಖೆ ತಕ್ಷಣ ತಾಂತ್ರಿಕ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಅಲ್ಲಲ್ಲಿ ಸುರಿದ ಸಾಧಾರಣ ಮಳೆಯಿಂದ ರೈತರಲ್ಲಿ ಆಶಾಭಾವನೆ ಮೂಡಿದೆಯಾದರೂ, ಕೇವಲ ಶೇ.20ರಿಂದ 30ರಷ್ಟು ಪ್ರದೇಶದಲ್ಲಿ ಮಾತ್ರ ಬೆಳೆಗಳು ಹಸಿರಾಗಿವೆ. ಇನ್ನೂ ಹಲವು ಕಡೆ ಮೊಳಕೆಯೊಡೆದ ಬೆಳೆಗಳು ಒಣಗುತ್ತಿದ್ದು, ಉತ್ತಮ ಮಳೆಯಾದರೆ ಮಾತ್ರ ಶೇ.40ರಿಂದ 50ರಷ್ಟು ಇಳುವರಿ ನಿರೀಕ್ಷಿಸಬಹುದು ಎಂದು ಹೇಳಿದರು.

ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಕೃತಕ ಅಭಾವ ಸೃಷ್ಟಿಯಾಗದಂತೆ ದಾಸ್ತಾನು ಕಾಯ್ದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ಬೆಳೆ ವಿಮೆ ಯೋಜನೆ ಕುರಿತು ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕು. ವಿಶೇಷವಾಗಿ ‘ಆಪ್ಟ್-ಔಟ್’ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ, ಅರ್ಹ ರೈತರು ನಿಗದಿತ ಅವಧಿಯೊಳಗೆ ವಿಮೆ ಸೌಲಭ್ಯ ಪಡೆಯುವಂತೆ ಬ್ಯಾಂಕ್ ಹಾಗೂ ಕೃಷಿ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವುದು, ಬೋರ್‌ವೆಲ್‌ಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ಡಿಬಿಒಟಿ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಸ್ಥಿತಿಗತಿಯನ್ನು ನಿರಂತರವಾಗಿ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹಾನಿಗೊಳಗಾದ ವಿದ್ಯುತ್ ಕಂಬಗಳು, ತಂತಿಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ತಕ್ಷಣ ದುರಸ್ತಿಗೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ್ ಮಾಹಿತಿ ನೀಡಿ, ಜಿಲ್ಲೆಯ 3.13 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 2.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ತೇವಾಂಶದ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಯೋಜನಾ ನಿರ್ದೇಶಕ ಬಸವನಗೌಡ ಕೋಟೂರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಬೆಳೆ ಹಾನಿ ಸಮೀಕ್ಷೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ. ರೈತರಿಗೆ ಬೆಳೆ ವಿಮೆ, ತಾಂತ್ರಿಕ ಮಾರ್ಗದರ್ಶನ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕು.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img