ತೆಲಂಗಾಣದ ಜನಗಾಂವ್ ಜಿಲ್ಲೆಯಲ್ಲಿ ರೈಲು ಸಿಗದ ಬೇಸರದಲ್ಲಿ ಮದ್ಯದ ಅಮಲಿನಲ್ಲಿದ್ದ ಟ್ರ್ಯಾಕ್ಟರ್ ಚಾಲಕನೊಬ್ಬ ಸರ್ಕಾರಿ ಆರ್ಟಿಸಿ ಬಸ್ ಕಳವು ಮಾಡಿ 21 ಕಿಲೋಮೀಟರ್ ಓಡಿಸಿದ ವಿಚಿತ್ರ ಘಟನೆ ನಡೆದಿದೆ. ಟೋಲ್ ಪ್ಲಾಜಾ ಬಳಿ ಬಸ್ ಅಪಘಾತಕ್ಕೀಡಾದ ಬಳಿಕ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಜನಗಾಂವ್ ಜಿಲ್ಲೆಯ ಚೆನ್ನೂರು ಗ್ರಾಮದ ನಿವಾಸಿ ವೆಂಕಣ್ಣ ವೃತ್ತಿಯಲ್ಲಿ ಟ್ರ್ಯಾಕ್ಟರ್ ಚಾಲಕ. ತಿರುಪತಿಗೆ ತೆರಳುವ ಉದ್ದೇಶದಿಂದ ರೈಲು ನಿಲ್ದಾಣಕ್ಕೆ ಎರಡು ಬಾರಿ ಹೋದರೂ ರೈಲು ಸಿಗದ ಕಾರಣ ಆತ ನಿರಾಶನಾಗಿದ್ದ. ಬಳಿಕ ಮದ್ಯ ಸೇವಿಸಿದ ವೆಂಕಣ್ಣ ಜನಗಾಂವ್ ಬಸ್ ನಿಲ್ದಾಣಕ್ಕೆ ತೆರಳಿದ್ದು, ಅಲ್ಲಿ ಲಾಕ್ ಮಾಡದೇ ನಿಲ್ಲಿಸಲಾಗಿದ್ದ ಆರ್ಟಿಸಿ ಬಸ್ ಗಮನಕ್ಕೆ ಬಂದಿದೆ.
ಬಸ್ನಲ್ಲಿ ಕೀ ಇಲ್ಲದಿದ್ದರೂ ಟೂಲ್ ಬಾಕ್ಸ್ ಬಳಸಿ ಬಸ್ ಸ್ಟಾರ್ಟ್ ಮಾಡಿದ ವೆಂಕಣ್ಣ, ಮೊದಲು ಬಸ್ ನಿಲ್ದಾಣದ ಸುತ್ತ ಒಂದು ಸುತ್ತು ಹಾಕಿ ಬಳಿಕ ಸೂರ್ಯಪೇಟೆ ಹೆದ್ದಾರಿಯತ್ತ ಪ್ರಯಾಣ ಬೆಳೆಸಿದ್ದಾನೆ. ರಾತ್ರಿ ವೇಳೆ ಸುಮಾರು 21 ಕಿಲೋಮೀಟರ್ಗಳಷ್ಟು ದೂರ ಬಸ್ ಓಡಿಸಿದ್ದಾನೆ.
ಸಿಂಗರಾಜುಪಲ್ಲಿ ಟೋಲ್ ಪ್ಲಾಜಾ ಬಳಿ ಬಸ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಬಸ್ ಅನ್ನು ರಿವರ್ಸ್ ಮಾಡುವ ಯತ್ನದಲ್ಲಿ ವೆಂಕಣ್ಣ ಅನುಮಾನಾಸ್ಪದವಾಗಿ ವರ್ತಿಸಿದ್ದರಿಂದ ಟೋಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಬಸ್ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಬಸ್ ಕದ್ದು ಮಾರಾಟ ಮಾಡುವ ಉದ್ದೇಶ ಇರಲಿಲ್ಲ; ಮದ್ಯದ ಅಮಲಿನಲ್ಲಿ ದೊಡ್ಡ ಬಸ್ ಓಡಿಸುವ ಆಸೆಯಿಂದಲೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



