ವಿಜಯಸಾಕ್ಷಿ ಸುದ್ದಿ, ಗದಗ: ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಮಾಸಾಶನ ವಿತರಿಸಬೇಕು ಹಾಗೂ ಅದಕ್ಕೆ ಆದಾಯ ಮಿತಿಯನ್ನು ವಿಧಿಸಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವಿಕಲಚೇತನರ ಘಟಕದ ಅಧ್ಯಕ್ಷ ರಾಘವೇಂದ್ರ ಮಿಶೆನ್ನವರ ಆಗ್ರಹಿಸಿದರು.
ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗವಿಕಲರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಬೇಕು. ಬಸ್ಗಳಲ್ಲಿ ಮೀಸಲು ಆಸನ ವ್ಯವಸ್ಥೆ ಮಾಡಬೇಕು. ಎಲ್ಲ ಸರ್ಕಾರಿ ಇಲಾಖೆಗಳ ಹೊರಗುತ್ತಿಗೆ ನೇಮಕಾತಿಯಲ್ಲಿ ಅಂಗವಿಕಲರಿಗೆ ಆದ್ಯತೆ ನೀಡಬೇಕು ಹಾಗೂ ಅವರಿಗಾಗಿ ಮೀಸಲಿರುವ ಶೇ.5ರಷ್ಟು ಅನುದಾನವನ್ನು ಸಮರ್ಪಕವಾಗಿ ಬಳಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ವಾಣಿಜ್ಯ ಮಳಿಗೆಗಳಲ್ಲಿ ಅಂಗವಿಕಲರಿಗೆ ಆದ್ಯತೆ ನೀಡಬೇಕು. ವಸತಿ ಸೌಲಭ್ಯ ಕಲ್ಪಿಸಬೇಕು. ಶೇ.40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರಿಗೆ ಯಂತ್ರಚಾಲಿತ ವಾಹನ ವಿತರಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಲಿಫ್ಟ್ ಆಪರೇಟರ್ ಹುದ್ದೆಗಳಿಗೆ ಅಂಗವಿಕಲರನ್ನೇ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶೀಘ್ರದಲ್ಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಘಟಕದ ಅಧ್ಯಕ್ಷ ಪರಶುರಾಮ ಆರ್. ಬೆಟಗೇರಿ, ಕೊಟ್ರೇಶ್ ಹೊನಗುಡಿ, ಪಾಂಡುರಂಗ ಹೆಬ್ವಾರ, ಮಂಜುನಾಥ ಜಾಲಗಾರ, ದುರ್ಗಪ್ಪ ಸಂಕನಕಲ್, ವೆಂಕಪ್ಪ, ಖಾಜಾ ಹುಸೇನ್ ಕಾತರಕಿ ಹಾಗೂ ಕೃಷ್ಣ ಜಾದವ್ ಉಪಸ್ಥಿತರಿದ್ದರು.



