HomeDakshina Kannadaಮಳೆ, ಪ್ರವಾಹದ ನಡುವೆಯೂ ಕರ್ತವ್ಯಕ್ಕೆ ಸೆಲ್ಯೂಟ್: ಹೊಳೆಗೆ ಧುಮುಕಿ ವಿದ್ಯುತ್ ತಂತಿ ಜೋಡಿಸಿದ ಮೆಸ್ಕಾಂ ಸಿಬ್ಬಂದಿ

ಮಳೆ, ಪ್ರವಾಹದ ನಡುವೆಯೂ ಕರ್ತವ್ಯಕ್ಕೆ ಸೆಲ್ಯೂಟ್: ಹೊಳೆಗೆ ಧುಮುಕಿ ವಿದ್ಯುತ್ ತಂತಿ ಜೋಡಿಸಿದ ಮೆಸ್ಕಾಂ ಸಿಬ್ಬಂದಿ

For Dai;y Updates Join Our whatsapp Group

ಪುತ್ತೂರು: ಒಂದು ಕಡೆ ಧಾರಾಕಾರ ಮಳೆ, ಮತ್ತೊಂದೆಡೆ ಉಕ್ಕಿ ಹರಿಯುತ್ತಿದ್ದ ಹೊಳೆ. ಜೀವಕ್ಕೆ ಅಪಾಯವಿದ್ದರೂ 12 ಮನೆಗಳು ಕತ್ತಲಲ್ಲಿ ಉಳಿಯಬಾರದು ಎಂಬ ಕಾರಣಕ್ಕೆ ಮೆಸ್ಕಾಂ ಪವರ್‌ಮ್ಯಾನ್‌ಗಳು ಹೊಳೆಗೆ ಧುಮುಕಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸಿದ ಘಟನೆ ಬೆಟ್ಟಂಪಾಡಿ ಗ್ರಾಮದ ದೂಮಡ್ಕದಲ್ಲಿ ನಡೆದಿದೆ.

ಬಂದೇ ನವಾಜ್, ಪ್ರವೀಣ್ ಹಾಗೂ ಬಸವರಾಜ್ ನೇತೃತ್ವದ ಮೆಸ್ಕಾಂ ಸಿಬ್ಬಂದಿ ಸ್ಥಳೀಯ ಜಾನು ನಾಯ್ಕ ಮತ್ತು ಊರವರ ನೆರವಿನೊಂದಿಗೆ ಈ ಸಾಹಸಿಕ ಕಾರ್ಯಾಚರಣೆ ನಡೆಸಿದ್ದಾರೆ.

ದೂಮಡ್ಕದ ಹೊಳೆ ಬದಿಯಲ್ಲಿರುವ ಸುಮಾರು 12 ಮನೆಗಳಿಗೆ ಹೊಳೆಯ ಇನ್ನೊಂದು ಬದಿಯಿಂದ ಎಲ್‌ಟಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಸತತ ಮಳೆಯಿಂದ ಸೀರೆ ಹೊಳೆ ಉಕ್ಕಿ ಹರಿಯುತ್ತಿದ್ದ ವೇಳೆ ಹೊಳೆ ದಡದಲ್ಲಿದ್ದ ಈಚಲು ಮರ ವಿದ್ಯುತ್ ಲೈನ್ ಮೇಲೆ ಉರುಳಿದೆ. ಇದರಿಂದ ಎರಡು ವಿದ್ಯುತ್ ತಂತಿಗಳು ತುಂಡಾಗಿ ಹೊಳೆಗೆ ಬಿದ್ದಿದ್ದವು.

ತಂತಿಗಳು ನೀರಿನ ರಭಸಕ್ಕೆ ಕೊಚ್ಚಿಹೋಗದಂತೆ ಸ್ಥಳೀಯರು ಅವುಗಳನ್ನು ಮರಕ್ಕೆ ಕಟ್ಟಿ ಹಿಡಿದಿದ್ದರು. ಆದರೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಮನೆಗಳು ಕತ್ತಲಲ್ಲಿ ಮುಳುಗಿದ್ದವು. ಸಮಸ್ಯೆ ಪರಿಹರಿಸಲು ಮುಂದಾದ ಮೆಸ್ಕಾಂ ಸಿಬ್ಬಂದಿ, ಅಪಾಯದ ನಡುವೆಯೇ ಹೊಳೆಗೆ ಇಳಿಯುವ ನಿರ್ಧಾರ ಕೈಗೊಂಡರು.

ಬಂದೇ ನವಾಜ್, ಪ್ರವೀಣ್ ಹಾಗೂ ಸ್ಥಳೀಯರೊಬ್ಬರು ತಂತಿ ಮತ್ತು ಹಗ್ಗವನ್ನು ಹಿಡಿದುಕೊಂಡು ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಈಜಿ ಎದುರು ದಡ ತಲುಪಿದರು. ಮತ್ತೊಂದೆಡೆ ಬಸವರಾಜ್ ಹಾಗೂ ಸ್ಥಳೀಯರು ತಂತಿಯನ್ನು ಅಗತ್ಯ ಸ್ಥಳಕ್ಕೆ ತಲುಪಿಸುವಲ್ಲಿ ನೆರವಾದರು.

ಮಳೆ ಹಾಗೂ ನೀರಿನ ಸೆಳೆತದ ನಡುವೆಯೇ ತಂತಿಯನ್ನು ನಿಗದಿತ ಸ್ಥಳಕ್ಕೆ ತಲುಪಿಸಿ ಮರುಜೋಡಣೆ ಮಾಡಲಾಯಿತು. ಬೆಟ್ಟಂಪಾಡಿ ಮೆಸ್ಕಾಂ ಶಾಖೆಯ ಕಿರಿಯ ಎಂಜಿನಿಯರ್ ಪುತ್ತು ಜೆ ಅವರು ಸ್ಥಳದಲ್ಲಿದ್ದು ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.

‘ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ 12 ಮನೆಗಳು ಕತ್ತಲಲ್ಲಿ ಉಳಿಯಬೇಕಾಗಿತ್ತು. ಪ್ರತಿಕೂಲ ಪರಿಸ್ಥಿತಿಯಲ್ಲೂ ಧೈರ್ಯದಿಂದ ಕಾರ್ಯಾಚರಣೆ ನಡೆಸಿ ಸಂಪರ್ಕ ಪುನರ್ ಕಲ್ಪಿಸಿದ್ದೇವೆ. ಇದು ನಮ್ಮ ಕರ್ತವ್ಯ. ಅಧಿಕಾರಿಗಳು ಮತ್ತು ಊರವರು ನೀಡಿದ ಸಹಕಾರದಿಂದ ಕೆಲಸ ಸಾಧ್ಯವಾಯಿತು’ ಎಂದು ಪವರ್‌ಮ್ಯಾನ್ ಬಂದೇ ನವಾಜ್ ಹೇಳಿದ್ದಾರೆ.

ಸಿಬ್ಬಂದಿಯ ಕರ್ತವ್ಯನಿಷ್ಠೆ ಹಾಗೂ ಧೈರ್ಯಕ್ಕೆ ಮೆಸ್ಕಾಂ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೀವದ ಹಂಗು ತೊರೆದು ಹೊಳೆಗೆ ಇಳಿದು ಮನೆಗಳಿಗೆ ಬೆಳಕು ಮರಳಿಸಿದ ಪವರ್‌ಮ್ಯಾನ್‌ಗಳ ಕಾರ್ಯಾಚರಣೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img