ಬೆಂಗಳೂರು: ನೇಪಾಳ–ಟಿಬೆಟ್ ಗಡಿ ಭಾಗದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ, ಅಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಹಾಗೂ ಅವರ ಮಾಹಿತಿ ಸಂಗ್ರಹಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ.
ಪ್ರವಾಹದಿಂದ ರಸ್ತೆ ಸಂಪರ್ಕ ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಹಲವು ಭಾರತೀಯರು ನಾಪತ್ತೆಯಾಗಿರುವ ವರದಿಗಳು ಬಂದಿವೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಕ್ಷಣಾ ಕಾರ್ಯಕ್ಕೆ ಸಜ್ಜಾಗಿದೆ.
ನೇಪಾಳ ಅಥವಾ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ (TAR) ಸಿಲುಕಿರುವ ಕನ್ನಡಿಗರು ಹಾಗೂ ಅವರ ಕುಟುಂಬಸ್ಥರ ವಿವರಗಳನ್ನು ಸರ್ಕಾರ ಕಲೆಹಾಕುತ್ತಿದೆ. ತಮ್ಮ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಿತರು ನೇಪಾಳ ಅಥವಾ ಟಿಬೆಟ್ ಭಾಗದಲ್ಲಿ ಸಿಲುಕಿಕೊಂಡಿದ್ದರೆ, ಅವರ ವಿವರಗಳನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಪ್ರಾಧಿಕಾರಕ್ಕೆ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಈ ಸಂಬಂಧ ಗೂಗಲ್ ಡಾಕ್ಸ್ ಮೂಲಕ ವಿವರಗಳನ್ನು ಸಲ್ಲಿಸುವಂತೆ ಮಾಹಿತಿ ಕೋರಲಾಗಿದೆ.
ಸದ್ಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿದ್ದು, ಸಿಲುಕಿರುವವರನ್ನು ಸುರಕ್ಷಿತವಾಗಿ ಕರೆತರಲು ಅಗತ್ಯ ನೆರವು ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.



