ಬೆಂಗಳೂರು: ರಾಜ್ಯದ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಪರಿಹಾರ ಮತ್ತು ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಲು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ ಎಂದು ಪ್ರಧಾನಮಂತ್ರಿಗಳೇ ಹೇಳಿರುವ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಹಾಗೂ ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಎಲ್ಲ ಪಕ್ಷಗಳ ನಾಯಕರು ತಮ್ಮೊಂದಿಗೆ ದೆಹಲಿಗೆ ಆಗಮಿಸಿ ಕೇಂದ್ರ ಸರ್ಕಾರದ ಬಳಿ ರಾಜ್ಯಕ್ಕೆ ಅಗತ್ಯ ಅನುದಾನ ಹಾಗೂ ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಬೇಕು ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ಬರ ಪರಿಸ್ಥಿತಿ ಚರ್ಚೆಗೆ ವಿಶೇಷ ಅಧಿವೇಶನ:
ರಾಜ್ಯದ ಬರ ಪರಿಸ್ಥಿತಿ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ರೈತರ ಸಮಸ್ಯೆ ಹಾಗೂ ಬರ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ಚರ್ಚಿಸಲು ವಿಪಕ್ಷಗಳಿಗೆ ಆಸಕ್ತಿ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬರ ಪರಿಸ್ಥಿತಿ ಕುರಿತು ಚರ್ಚಿಸುವ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಶಾಸಕರೇ ತಮ್ಮ ಬಳಿ ಬಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳು ಹಾಗೂ ರಾಜ್ಯದ ನೈಜ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರತ್ಯೇಕವಾಗಿ ವಿಶೇಷ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮೂರು ದಿನಗಳ ವಿಶೇಷ ಅಧಿವೇಶನ:
ರೈತರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲು ರಾಜ್ಯ ಸರ್ಕಾರ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನದಲ್ಲಿ ರಾಜ್ಯದ ಬರ ಪರಿಸ್ಥಿತಿ, ರೈತರ ಸಮಸ್ಯೆಗಳು ಹಾಗೂ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿಯ ಕುರಿತು ರಾಜ್ಯ ಸರ್ಕಾರ ಸಲ್ಲಿಸಬೇಕಾದ ಆಕ್ಷೇಪಣೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ವಿಶೇಷ ಅಧಿವೇಶನವನ್ನು ಏಳು ದಿನಗಳಿಗೆ ವಿಸ್ತರಿಸಬೇಕೆಂಬ ವಿಪಕ್ಷಗಳ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲರ ಅಭಿಪ್ರಾಯವನ್ನು ಆಲಿಸಲಾಗುವುದು. ಎಲ್ಲ ಶಾಸಕರೂ ಜನಪ್ರತಿನಿಧಿಗಳಾಗಿದ್ದು, ಅಧಿವೇಶನದಲ್ಲಿ ಮುಕ್ತವಾಗಿ ಚರ್ಚೆ ನಡೆಯಬೇಕು ಎಂದರು.
‘ಹೊಸ ಬೆಂಗಳೂರು ನಿರ್ಮಾಣಕ್ಕೆ ನೆರವು’:
ನೀತಿ ಆಯೋಗದೊಂದಿಗಿನ ಸಭೆಯಲ್ಲಿ ರಾಜ್ಯಕ್ಕೆ ಅನುದಾನ ಹಂಚಿಕೆ ಸರಿಯಾಗಿ ಆಗಬೇಕು ಎಂದು ಒತ್ತಾಯಿಸಿರುವ ಕುರಿತು ಮಾತನಾಡಿದ ಡಿಕೆಶಿ, ‘ಹೊಸ ಬೆಂಗಳೂರು’ ನಿರ್ಮಾಣದ ಯೋಜನೆ ಕುರಿತು ನೀತಿ ಆಯೋಗದ ಉಪಾಧ್ಯಕ್ಷರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಹೊಸ ಬೆಂಗಳೂರು ನಿರ್ಮಾಣಕ್ಕೆ ಅಗತ್ಯವಿರುವ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಕರ್ನಾಟಕ ಮತ್ತು ಬೆಂಗಳೂರು ದೇಶಕ್ಕೆ ಬಹಳ ಮುಖ್ಯ ಎಂದು ನೀತಿ ಆಯೋಗದ ಉಪಾಧ್ಯಕ್ಷರು ಹೇಳಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.



