ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಬಳಿಯ ಪಿಜಿ ಕಟ್ಟಡ ಕುಸಿತದಲ್ಲಿ ಮೃತಪಟ್ಟ ವಿದ್ಯಾರ್ಥಿ ಅರ್ಪಿತ್ ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಊರಿಗೆ ತೆರಳುವ ಮುನ್ನ ರೈಲ್ವೆ ನಿಲ್ದಾಣದಲ್ಲಿ ಸಹೋದರಿ ಒಂಟಿಯಾಗಿ ಸೀನಿದ್ದನ್ನು ಅಪಶಕುನವೆಂದು ಭಾವಿಸಿದ್ದ ತಾಯಿ, ‘ಇವತ್ತು ಹೋಗಬೇಡ’ ಎಂದು ಮಗನನ್ನು ತಡೆದಿದ್ದರು. ಆದರೆ ಟಿಕೆಟ್ ಕನ್ಫರ್ಮ್ ಆಗಿದ್ದು, ಕ್ಲಾಸ್‌ಗಳು ಆರಂಭವಾಗಲಿವೆ ಎಂದು ಅರ್ಪಿತ್ ದೆಹಲಿಗೆ ತೆರಳಿದ್ದರು. ಕೆಲವೇ ಗಂಟೆಗಳ ಬಳಿಕ ಆತ ಮೃತಪಟ್ಟಿರುವ ಸುದ್ದಿ ಕುಟುಂಬಕ್ಕೆ ಆಘಾತ ನೀಡಿದೆ.
ರಕ್ಷಾಬಂಧನಕ್ಕಾಗಿ ಊರಿಗೆ ತೆರಳಿದ್ದ ಅರ್ಪಿತ್ ಸೆಪ್ಟೆಂಬರ್ 6ರ ಬೆಳಗ್ಗೆಯೇ ದೆಹಲಿಗೆ ವಾಪಸ್ ಬಂದಿದ್ದರು. ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಬಳಿಯಿದ್ದ ಐದು ಅಂತಸ್ತಿನ ಬಾಯ್ಸ್ ಪಿಜಿ ಕಟ್ಟಡದಲ್ಲೇ ಅವರು ವಾಸವಾಗಿದ್ದರು. ಮಧ್ಯಾಹ್ನ ಸುಮಾರು 1:30ರ ವೇಳೆಗೆ ಕಟ್ಟಡ ಕುಸಿದಿದ್ದು, ಅದಕ್ಕೂ ಒಂದು ಗಂಟೆ ಮೊದಲು, ಸುಮಾರು 12:30ಕ್ಕೆ ಅರ್ಪಿತ್ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಅದೇ ಅವರ ಕೊನೆಯ ಕರೆ. ಬಳಿಕ ತಾಯಿ ಹಲವು ಬಾರಿ ಕರೆ ಮಾಡಿದರೂ ಅರ್ಪಿತ್ ಕರೆ ಸ್ವೀಕರಿಸಿರಲಿಲ್ಲ.
ನಂತರ ಮಗ ಕಟ್ಟಡ ಕುಸಿತದಲ್ಲಿ ಮೃತಪಟ್ಟಿರುವ ಸುದ್ದಿ ತಿಳಿದ ತಾಯಿ ಆಘಾತಕ್ಕೊಳಗಾಗಿದ್ದಾರೆ. ಮಗನ ಮೃತದೇಹ ನೋಡುತ್ತಿದ್ದಂತೆಯೇ ಕುಸಿದುಬಿದ್ದ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಜ್ಞೆ ಬಂದ ಬಳಿಕವೂ ಮಗನ ಸಾವನ್ನು ನಂಬಲು ಅವರು ಸಿದ್ಧರಾಗಿರಲಿಲ್ಲ.
ದೆಹಲಿಗೆ ಹೊರಡುವ ಮುನ್ನ ತಮಗಿದ್ದ ಆತಂಕವನ್ನು ನೆನಪಿಸಿಕೊಂಡ ತಾಯಿ, ‘ನಾನು ಅವನನ್ನು ದೆಹಲಿಗೆ ಬರಲು ಯಾಕೆ ಬಿಟ್ಟೆ? ಏನೋ ಕೆಟ್ಟದ್ದು ಸಂಭವಿಸುತ್ತದೆ ಎಂಬ ಭಾವನೆ ನನಗಿತ್ತು’ ಎಂದು ಕಣ್ಣೀರಿಟ್ಟಿದ್ದಾರೆ.
ಭಾನುವಾರ ಮಧ್ಯಾಹ್ನ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಒಟ್ಟು 7 ಮಂದಿ ಮೃತಪಟ್ಟಿದ್ದು, 12 ಜನರನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕ ಹರಿರಾಮ್ ಗುಪ್ತಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.



