ರಿಯಾದ್: ಹಾರ್ಮುಜ್ ಜಲಸಂಧಿಯನ್ನು ಬೈಪಾಸ್ ಮಾಡಿ ತೈಲ ಸಾಗಿಸುತ್ತಿದ್ದ ಸೌದಿ ಅರೇಬಿಯಾದ ಈಸ್ಟ್-ವೆಸ್ಟ್ ಪೈಪ್‌ಲೈನ್ ಮೇಲೆ ಡ್ರೋನ್ ದಾಳಿ ನಡೆದಿದೆ.
ದಾಳಿಯ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಪೈಪ್‌ಲೈನ್ ಕಾರ್ಯಾಚರಣೆಯನ್ನು ಸೌದಿ ಅರೇಬಿಯಾ ಸ್ಥಗಿತಗೊಳಿಸಿದೆ. ರಿಯಾದ್ ಮತ್ತು ಮದೀನಾ ಪ್ರದೇಶಗಳಲ್ಲಿರುವ ಪೈಪ್‌ಲೈನ್ ಮೇಲೆ ಇರಾಕ್ ಮೂಲದಿಂದ ಬಂದ ಹಲವು ಡ್ರೋನ್‌ಗಳು ದಾಳಿ ನಡೆಸಿವೆ ಎನ್ನಲಾಗಿದೆ. ದಾಳಿಯಿಂದ ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ ಎಂದು ಸೌದಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸುರಕ್ಷತಾ ಪರಿಶೀಲನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೈಪ್‌ಲೈನ್ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ಸುಮಾರು 50ರಿಂದ 70 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಪೈಪ್‌ಲೈನ್, ಗಲ್ಫ್ ಮೂಲಕ ತೈಲ ಸಾಗಣೆಗೆ ಪ್ರಮುಖ ಪರ್ಯಾಯ ಮಾರ್ಗವಾಗಿದೆ.
ದಾಳಿಯ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲೂ ಕಂಡುಬಂದಿದೆ. ಡಬ್ಲ್ಯುಟಿಐ ಮತ್ತು ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಶೇ.3ಕ್ಕೂ ಹೆಚ್ಚು ಏರಿಕೆಯಾಗಿದ್ದು, ಬ್ರೆಂಟ್ ದರ ಪ್ರತಿ ಬ್ಯಾರೆಲ್‌ಗೆ ಸುಮಾರು 108 ಡಾಲರ್‌ಗೆ ತಲುಪಿದೆ.
ಪೈಪ್‌ಲೈನ್ ಸ್ಥಗಿತ ದೀರ್ಘಕಾಲ ಮುಂದುವರಿದರೆ ಜಾಗತಿಕ ತೈಲ ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ತೈಲ ಸಂಸ್ಕರಣಾಗಾರಗಳು ಪರ್ಯಾಯ ಕಚ್ಚಾ ತೈಲ ಪೂರೈಕೆ ಮಾರ್ಗಗಳ ಕುರಿತು ಪರಿಶೀಲನೆ ನಡೆಸುತ್ತಿವೆ.
ತೈಲ ಲಭ್ಯತೆ ಮತ್ತು ಸಾಗಣೆ ವೆಚ್ಚದ ಮೇಲೆ ಪರಿಣಾಮ ಬಿದ್ದರೆ, ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತಷ್ಟು ಅನಿಶ್ಚಿತತೆ ಉಂಟಾಗುವ ಸಾಧ್ಯತೆ ಇದೆ.



