ಚಿಕ್ಕಬಳ್ಳಾಪುರ: ಪತ್ನಿಯನ್ನು ಲಾಡ್ಜ್ಗೆ ಕರೆದುಕೊಂಡು ಬಂದ ಪತಿಯೇ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಲಾಡ್ಜ್ನಲ್ಲಿ ಈ ಘಟನೆ ನಡೆದಿದೆ.
ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ 23 ವರ್ಷದ ವಿದ್ಯಾ ಮೃತ ಮಹಿಳೆ. ಆಕೆಯ ಪತಿ ಆನಂದ್ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಐಡಿ ಕಾರ್ಡ್ನ ಟ್ಯಾಗ್ ಬಳಸಿ ಕತ್ತು ಬಿಗಿದು ಉಸಿರುಗಟ್ಟಿಸಿ ವಿದ್ಯಾಳನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಬಳಿಕ ಆಕೆಯ ಮೊಬೈಲ್ ತೆಗೆದುಕೊಂಡು ಆನಂದ್ ಲಾಡ್ಜ್ನಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ವಿದ್ಯಾ ಹಾಗೂ ಆನಂದ್ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಒಂದು ಗಂಡು ಮಗುವಿದ್ದು, ದೊಡ್ಡಬಳ್ಳಾಪುರ ನಗರದ ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಕಳೆದ ಆರು ತಿಂಗಳಿಂದ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳ ಹಿಂದೆ ವಿದ್ಯಾ ಗಂಡನಿಂದ ದೂರವಾಗಿ ಬೆಂಗಳೂರಿನ ಪಿಜಿಯೊಂದರಲ್ಲಿ ವಾಸವಾಗಿದ್ದರು. ಇತ್ತ ಪತ್ನಿ ಕಾಣೆಯಾಗಿರುವುದಾಗಿ ಆನಂದ್ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದ ಎನ್ನಲಾಗಿದೆ.
ಸುಮಾರು 20 ದಿನಗಳ ಹಿಂದೆ ಪೊಲೀಸರು ವಿದ್ಯಾಳನ್ನು ಕರೆಸಿ, ದಂಪತಿಗೆ ಬುದ್ಧಿವಾದ ಹೇಳಿ ಮತ್ತೆ ಆನಂದ್ ಜೊತೆ ಕಳುಹಿಸಿದ್ದರು. ಆದರೆ ಬುಧವಾರ ವಿದ್ಯಾಳನ್ನು ಲಾಡ್ಜ್ಗೆ ಕರೆದುಕೊಂಡು ಬಂದಿದ್ದ ಆನಂದ್, ಅಲ್ಲಿಯೇ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆನಂದ್ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆನಂದ್ ಪತ್ತೆಯಾದ ಬಳಿಕ ಘಟನೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.



